More

    ಜಿಲ್ಲಾಧಿಕಾರಿ ಮೇಲೆ ಮಾಡುತ್ತಿರುವ ತೇಜೋವಧೆ ಖಂಡನೀಯ:ಮರಿ ಜೋಸೆಫ್

    ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹಾಸನದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರ ತೇಜೋವಧೆ ಮಾಡುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಕಾರ್ಯಕರ್ತರ ವರ್ತನೆ ಖಂಡನೀಯ ಎಂದು ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಆರ್. ಮರಿ ಜೋಸೆಫ್ ಹೇಳಿದರು.
    ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ವಿರುದ್ಧ ‘ಗೋ ಬ್ಯಾಕ್ ಡಿಸಿ’ ಎಂಬೆಲ್ಲಾ ಘೋಷಣೆಗಳನ್ನು ಕೂಗಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್. ಲಿಂಗೇಶ್ ಅವರು ನಿಂದನೆಯ ಹೇಳಿಕೆ ನೀಡಿದ್ದಾರೆ. ಇಂತಹ ವರ್ತನೆಯನ್ನು ಜೆಡಿಎಸ್ ಕಾರ್ಯಕರ್ತರು ಮುಂದುವರಿಸಬಾರದು. ಈ ಪ್ರಕರಣದ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಇಡೀ ಸಮಾಜವೇ ತಲೆ ತಗ್ಗಿಸುವ ಕೆಲಸ ಮಾಡಿರುವ ಪ್ರಜ್ವಲ್, ದೇವರಾಜೇಗೌಡ ಮತ್ತು ಕಾರ್ತಿಕ್ ಗೌಡನನ್ನು ಕೂಡಲೇ ಬಂಧಿಸಬೇಕು. ಹಾಗೂ ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ಆಗ ಪ್ರಕರಣ ಬಳಿಕ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ. ನೂರಾರು ಮಹಿಳೆಯರ ವಿಡಿಯೋ ಮಾಡಿ ಅವರ ಮಾನ ಹರಾಜಾಕಿರುವ ಪ್ರಜ್ವಲ್ ರೇವಣ್ಣ ಬಂಧನ ವಿಚಾರದಲ್ಲಿ ಕೇಂದ್ರ ಸರ್ಕಾರ ನಾಟಕ ಆಡುವುದನ್ನು ಬಿಟ್ಟು ಕೂಡಲೇ ಆರೋಪಿ ಬಂಧನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
    ಸದ್ಯದ ಬೆಳವಣಿಗೆ ನೋಡಿದರೆ ಇಡೀ ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಈ ಜಿಲ್ಲೆಯಲ್ಲಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಜೈಭೀಮ್ ಬ್ರಿಗೇಡ್‌ನ ಜಿಲ್ಲಾಧ್ಯಕ್ಷ ರಾಜೇಶ್, ದಸಂಸ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು, ವಿರೂಪಾಕ್ಷ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts