More

    ಅಜಾಗರೂಕತೆಯಿಂದ ವಾಹನ ಚಾಲನೆ: ಆರೋಪಿಗಳಿಗೆ ಕನಿಷ್ಟ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜಕ್ಕೆ ಅನ್ಯಾಯ ಹೈಕೋರ್ಟ್

    ಬೆಂಗಳೂರು : ರಸ್ತೆ ಅಪಘಾತಗಳಿಗೆ ಕಾರಣರಾಗುವ ಚಾಲಕರಿಗೆ ಕನಿಷ್ಟ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜಕ್ಕೆ ಅನ್ಯಾಯ ಮಾಡಿದಂತೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಜಾಗರೂಕತೆಯಿಂದ ಆಂಬುಲೆನ್ಸ್ ಚಲಾಯಿಸಿ ಕಾರು ಚಾಲಕನ ಸಾವಿಗೆ ಕಾರಣವಾಗಿದ್ದ ಆರೋಪಿಗೆ ವಿಚಾರಣಾ ನ್ಯಾಯಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ.

    ಶಿಕ್ಷೆ ಖಚಿತ ಪಡಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡಿವಳೆ ತಾಲೂಕಿನ ಸಂತೋಷ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

    ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ರಸ್ತೆ ಅಪಘಾತದಿಂದ ಒಂದು ಜೀವ ಕಳೆದುಕೊಳ್ಳುವಂತಹ ಪ್ರಕರಣಗಳಲ್ಲಿ ಕನಿಷ್ಟ ಪ್ರಮಾಣದ ಶಿಕ್ಷೆ ಮತ್ತು ದಂಡ ವಿಧಿಸದಿದ್ದಲ್ಲಿ ಸಮಾಜ ಮತ್ತು ಸಂತ್ರಸ್ತರ ಕುಟುಂಬಕ್ಕೆ ಅನ್ಯಾಯ ಎಸಗಿದಂತಾಗಲಿದೆ ಎಂದು ಹೇಳಿದೆ.

    ಇಂತಹ ಪ್ರಕರಣಗಳನ್ನು ರದ್ದುಗೊಳಿಸುವುದರಿಂದ ಅಜಾಗರೂಕ ಚಾಲನೆ ಪ್ರೋತ್ಸಾಹಿಸಿದಂತಾಗಲಿದೆ. ಇದರಿಂದಾಗಿ ಸಂಚಾರ ನಿಯಮ ಪಾಲಿಸದೆ ನಿರ್ಲಕ್ಷ್ಯ ಹೆಚ್ಚಳಕ್ಕೆ ಕಾರಣವಾಗಬಹುದು ಹಾಗೂ ಮನುಷ್ಯನ ಜೀವದ ಮೌಲ್ಯಕ್ಕೆ ಬೆಲೆಯೇ ಇಲ್ಲದಂತಾಗಲಿದೆ. ಪ್ರಕರಣದ ಗಂಭೀರತೆ ಮತ್ತು ಸಾಕ್ಷ್ಯಾಧಾರಗಳನ್ನು ಪರಿಗಣಿಸಿರುವ ವಿಚಾರಣಾ ನ್ಯಾಯಾಲಯ ಸರಿಯಾದ ಕಾನೂನು ಪ್ರಕಾರವೇ ಶಿಕ್ಷೆ ವಿಧಿಸಿದೆ.

    ಈ ಶಿಕ್ಷೆ ಅತ್ಯಂತ ಕಠಿಣವೂ ಅಲ್ಲ ಮತ್ತು ಸರಳವೂ ಅಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.

    ಪ್ರಕರಣದ ಹಿನ್ನಲೆ )
    ಅರ್ಜಿದಾರ ತಾನು ಚಾಲನೆ ಮಾಡುತ್ತಿದ್ದ ಆಂಬುಲೆನ್ಸ್ ವಾಹನವನ್ನು 2011ರ ಏ.19ರಂದು ಮೂಡಿಗೆರೆಯಿಂದ ಮಂಗಳೂರು ಕಡೆಗೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದರು. ಈ ವೇಳೆ ಬಿದರಳ್ಳಿ ಗ್ರಾಮದಲ್ಲಿ ಮಾರುತಿ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಿಂದ ಕಾರಿನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಉಳಿದ ಇತರೆ ಮೂವರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

    ಪ್ರಕರಣ ದಾಖಲಿಸಿಕೊಂಡಿದ್ದ ಮೂಡಿಗೆರೆ ಪೊಲೀಸರು ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಆರೋಪಿಗೆ 6 ತಿಂಗಳು ಸಾಧಾರಣ ಶಿಕ್ಷೆ ಮತ್ತು 4 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಅರ್ಜಿದಾರರು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶವನ್ನು ಎತ್ತಿಹಿಡಿದಿತ್ತು, ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts