ಕ್ಲಾಸಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ: ಮುಸ್ಲಿಂ ಸಂಘಟನೆ ಮುಖ್ಯಸ್ಥನ ಹೇಳಿಕೆ..

Muslim
Published on

ಕೇರಳ: ರಾಜ್ಯದಲ್ಲಿ ಸಾವರ್ಕರ್ ಫೋಟೋ, ಮೊಟ್ಟೆಯ ವಿಚಾರಗಳೇ ದೊಡ್ಡ ವಿವಾದವಾಗಿ ಚರ್ಚೆಯಲ್ಲಿದ್ದರೆ ಅತ್ತ ಕೇರಳದಲ್ಲಿ ಮುಸ್ಲಿಂ ಸಂಘಟನೆಯೊಂದರ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ತರಗತಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ ಎಂಬುದಾಗಿ ಆತ ಹೇಳಿದ್ದಾನೆ.

ಕೇರಳದ ಇಂಡಿಯನ್​ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್​) ಸಂಘಟನೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ಎಂಬಾತ ಈ ಹೇಳಿಕೆ ನೀಡಿದ್ದಾನೆ. ಕೇರಳದಲ್ಲಿ ಅಲ್ಲಿನ ಸರ್ಕಾರ ಲಿಂಗಭೇದವಿಲ್ಲದ ಶಿಕ್ಷಣ ವ್ಯವಸ್ಥೆ ಪರಿಚಯಿಸುವ ಪ್ರಯತ್ನಕ್ಕೆ ಸಂಬಂಧಿಸಿ ಸಲಾಂ ಈ ಹೇಳಿಕೆ ನೀಡಿದ್ದಾನೆ.

ತರಗತಿಯಲ್ಲಿ ಹುಡುಗ-ಹುಡುಗಿಯರನ್ನು ಒಟ್ಟಿಗೆ ಕುಳ್ಳಿರಿಸುವ ಅಗತ್ಯ ಏನಿದೆ? ಯಾಕೆ ನೀವು ಅವರಿಗೆ ಅಂಥ ಅವಕಾಶ ಕಲ್ಪಿಸಿಕೊಡುತ್ತಿದ್ದೀರಿ? ಹಾಗೆ ಮಾಡುವುದು ಅಪಾಯಕಾರಿ. ಅದು ವಿದ್ಯಾರ್ಥಿಗಳನ್ನು ಕಲಿಕೆಯಿಂದ ವಿಚಲಿತಗೊಳಿಸುವುದಷ್ಟೇ ಅಲ್ಲ, ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂಬುದಾಗಿ ಆತ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಲಿಂಗಭೇದ ಇಲ್ಲದಿರುವುದು ಧಾರ್ಮಿಕ ವಿಷಯವಲ್ಲ, ಅದು ನೈತಿಕ ವಿಷಯ. ಇದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಿದೆ. ನಾವು ಇದನ್ನು ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ. ಮುಸ್ಲಿಂ ಸಂಘಟನೆಗಳು ಇಲ್ಲಿ ಈ ಹಿಂದೆಯೂ ಇದೇ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net