

ಬೆಂಗಳೂರು: ಆರ್‌ಎಸ್‌ಎಸ್‌ನ ಮೊದಲ ಭಯೋತ್ಪಾದಕ ಸಾವರ್ಕರ್. ಬೆಂಗಳೂರಿನ ಕಸದ ತೊಟ್ಟಿ ಮೇಲೂ ಸಾವರ್ಕರ್ ಫೋಟೋ ಹಾಕಲು ಯೋಗ್ಯತೆ ಇಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಮೊಟ್ಟೆ ದಾಳಿ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು, ಈ ವೇಳೆ ಮಾತನಾಡಿದ ಅವರು, ಆರ್‌ಎಸ್‌ಎಸ್, ಬಿಜೆಪಿಯವರು ಮೊಟ್ಟೆ ಕದ್ದು ತಿಂತಾರೆ. ರಸಲ್ ಮಾರ್ಕೆಟ್‌ಗೆ ಹೋಗಿ ನೋಡಿ, ಕದ್ದು ಮಾಂಸ ತಿನ್ನುತ್ತಿರುತ್ತಾರೆ ಎಂದರು.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ನಮ್ಮ ನಾಯಕರು ಮೊಟ್ಟೆ ಎಸೆಯುವಂತಹ ಹೇಳಿಕೆ ಏನು ನೀಡಿದ್ದಾರೆ. ಸಾವರ್ಕರ್ ಹೆಸರನ್ನು ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಕೈಬಿಡಬೇಕಾಗುತ್ತೆ. ನಾವು ಮೊಟ್ಟೆ ತೆಗೆದುಕೊಂಡರೆ ನೀವು ಎಲ್ಲೂ ಹೋಗಲು ಆಗೋದಿಲ್ಲ ಎಂದು ಎಚ್ಚರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮಾತನಾಡಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿದಿದೆಯೇ? ಸಿಎಂ, ಗೃಹ ಸಚಿವರಿಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ ಯಾವುದೇ ಟಿಪ್ಪು ಕಾರ್ಯಕ್ರಮಕ್ಕೆ ಹೋಗಿಲ್ಲ. ಮಳೆಹಾನಿಯಿಂದ ನಲುಗಿರುವ ಜನರ ಕಷ್ಟ ಆಲಿಸಲು ಹೋಗಿದ್ದಾರೆ. ಇದು ಹೀಗೆ ಆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಕೃಷ್ಣ ಬೈರೇಗೌಡ, ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆಯುವುದು ಅವರಿಗೆ ಮಾಡಿದ ಅವಮಾನವಲ್ಲ. ಇದು ಕರ್ನಾಟಕದ ಪ್ರಗತಿ, ಸಹಿಷ್ಣುತೆ, ಉನ್ನತ ಸಂಸ್ಕೃತಿ ಮತ್ತು ಹಿರಿಯರನ್ನು ಗೌರವಿಸುವ ಸಂಪ್ರದಾಯಗಳಿಗೆ ಅವಮಾನವಾಗಿದೆ ಎಂದರು.
ಕರ್ನಾಟಕದ ಸಂಪ್ರದಾಯಗಳ ಮೇಲೆ ಬಿಜೆಪಿಯ ಸಂಸ್ಕಾರವಿಲ್ಲದ ಕಾನೂನುಬಾಹಿರ ದಾಳಿಗಳು ಕರ್ನಾಟಕಕ್ಕೇ ಹಾನಿ ಮಾಡುತ್ತಿವೆ. ಬಿಜೆಪಿಯ ಅಧಿಕಾರದ ದುರಾಸೆ ಕರ್ನಾಟಕದ ನಂ.1 ರಾಜ್ಯ ಎಂಬ ಖ್ಯಾತಿಯನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ಅವರು ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಅವರು ಮಾಡಿದ್ದೇ ಸರಿ ಎಂದು ಸಮರ್ಥಿಸಬಾರದು ಎಂದರು.