More

    ಮರು ಪರಿಷ್ಕೃತ ಪಠ್ಯ ರೆಡಿ, ವೆಬ್​ಸೈಟ್​ನಲ್ಲಿ ಸಾಫ್ಟ್ ಕಾಪಿ: ಮುದ್ರಣದ ಕಾರ್ಯ ಪ್ರಗತಿ, 3 ವಾರದ ಬಳಿಕ ಶಾಲೆಗಳಿಗೆ ರವಾನೆ

    ಬೆಂಗಳೂರು: ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ಶಾಲಾ ಪಠ್ಯಪುಸ್ತಕವನ್ನು ಮರು ಪರಿಷ್ಕರಿಸಿರುವ ಕರ್ನಾಟಕ ಪಠ್ಯಪುಸ್ತಕ ಸಂಘವು ಪರಿಷ್ಕೃತ (ತಿದ್ದೋಲೆ) ಪ್ರತಿಯನ್ನು (www.ktbs.kar.nic.in) ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಿದೆ. ಪರಿಷ್ಕೃತ ಪ್ರತಿಯನ್ನು ಶಾಲಾ ಮುಖ್ಯಸ್ಥರು ಡೌನ್​ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಬೋಧಿಸಬಹುದಾಗಿದೆ. ಮುದ್ರಣದ ಕಾರ್ಯ ಪ್ರಗತಿಯಲ್ಲಿದ್ದು, 3 ವಾರಗಳಲ್ಲಿ ಮುದ್ರಣ ಕಾರ್ಯ ಪೂರ್ಣಗೊಳ್ಳಲಿದ್ದು ಆ ಬಳಿಕ ರಾಜ್ಯದ ಎಲ್ಲ ಶಾಲೆಗಳಿಗೆ ಪೂರೈಕೆ ಮಾಡಲಾಗುವುದು ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ ಮಾದೇಗೌಡ ವಿಜಯವಾಣಿಗೆ ತಿಳಿಸಿದ್ದಾರೆ.

    ಒಟ್ಟಾರೆ ಪಠ್ಯಪುಸ್ತಕ ಮುದ್ರಣಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘವು ಅಂದಾಜು 200 ಕೋಟಿ ರೂ. ವೆಚ್ಚ ಮಾಡಿದ್ದು, ಮರು ಪರಿಷ್ಕೃತ ಪಠ್ಯಕ್ಕೆ ಸುಮಾರು 12 ಲಕ್ಷ ರೂ. ವೆಚ್ಚ ಆಗಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿ ರಚನೆ ಮಾಡಿತ್ತು. ಆ ಸಮಿತಿ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿ ನೀಡಿತ್ತು. ಆದರೆ, ಈ ಪರಿಷ್ಕೃತ ಪಠ್ಯದಲ್ಲಿ ಕುವೆಂಪು, ಬಸವಣ್ಣ, ಹೋರಾಟಗಾರರ ಗದ್ಯ ಕೈ ಬಿಟ್ಟಿರುವುದು, ತಪ್ಪಾಗಿ ಅರ್ಥೈಸಿರುವ ಬಗ್ಗೆ ವಿವಾದ ಭುಗಿಲೆದಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಆ ಸಮಿತಿ ವಿರ್ಸಜನೆ ಮಾಡಿತ್ತು. ಬಳಿಕ ಮರು ಪರಿಷ್ಕರಣೆ ಮಾಡುವುದಾಗಿ ತಿಳಿಸಿತ್ತು. ಅದರ ಪ್ರಕಾರವಾಗಿ ಮರು ಪರಿಷ್ಕೃತ ಪಠ್ಯವನ್ನು ಕರ್ನಾಟಕ ಪಠ್ಯಪುಸ್ತಕ ಸಂಘವು ಹೊರತಂದಿದೆ. ‘ಪರಿಷ್ಕೃತ -2022ರ ಪಠ್ಯಪುಸ್ತಕಗಳ ತಿದ್ದೋಲೆ’ ಎಂಬ ಶೀರ್ಷಿಕೆ ಅಡಿ ಮರು ಪರಿಷ್ಕೃತ ಪಠ್ಯವನ್ನು ಬಿಡುಗಡೆ ಮಾಡಿದೆ. ಇದು 31 ಪುಟಗಳನ್ನು ಇದು ಹೊಂದಿದೆ. ಇದರಲ್ಲಿ ಪರಿಷ್ಕೃತ ಪಠ್ಯದಲ್ಲಿರುವ ಅಂಶಗಳು ಮತ್ತು ಮರು ಪರಿಷ್ಕರಣೆಯ ನಂತರ ಮಾಡಿರುವ ಅಂಶಗಳನ್ನು ಪ್ರತ್ಯೇಕ ಕಾಲಂಗಳಲ್ಲಿ ಪ್ರಕಟಿಸಿದೆ.

    ಏನೆಲ್ಲ ಬದಲಾವಣೆ ಆಗಿದೆ?: 4ನೇ ತರಗತಿ ಪರಿಸರ ಅಧ್ಯಯನ ಪಠ್ಯದಲ್ಲಿ ‘ಪ್ರತಿಯೊಬ್ಬರು ವಿಶಿಷ್ಠ‘ ಎಂಬ ಶೀರ್ಷಿಕೆಯಲ್ಲಿ ಕುವೆಂಪು ಪರಿಚಯ ನೀಡಲಾಗಿದೆ. ಪರಿಷ್ಕೃತ ಪಠ್ಯದಲ್ಲಿ ‘ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಸಾಲುಗಳನ್ನು ಸೇರಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಇದೀಗ ಮರು ಪರಿಷ್ಕೃತ ಪಠ್ಯದಲ್ಲಿ ಈ ವಾಕ್ಯವನ್ನು ತೆಗೆಯಲಾಗಿದೆ. 7ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ‘ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು’ ಎಂಬ ಶೀರ್ಷಿಕೆಯಲ್ಲಿರುವ ಗದ್ಯದಲ್ಲಿ ಕುವೆಂಪು ಭಾವಚಿತ್ರ ಕೈಬಿಡಲಾಗಿತ್ತು. ಮರು ಪರಿಷ್ಕೃತ ಪಠ್ಯದಲ್ಲಿ ಕುವೆಂಪು ಅವರ ಚಿತ್ರ ಮರು ಸೇರ್ಪಡೆ ಮಾಡಲಾಗಿದೆ. 9ನೇ ತರಗತಿ ‘ಸಮಾಜ ವಿಜ್ಞಾನ’ ಅಧ್ಯಾಯದಲ್ಲಿ ‘ಬಸವೇಶ್ವರರು’ ಎಂಬ ಶೀರ್ಷಿಕೆಯನ್ನು ‘ವಿಶ್ವಗುರು ಬಸವಣ್ಣನವರು’ ಎಂದು ಮರು ಪರಿಷ್ಕರಿಸಿದೆ. ಅದೇ ರೀತಿ, ಉಪನಯನದ ವಿಚಾರ ವಿವಾದವಾಗಿತ್ತು. ಇದನ್ನು ಮರು ಪರಿಷ್ಕರಿಸಿ ‘ಬಾಲ್ಯದಲ್ಲಿ ಬ್ರಾಹ್ಮಣ ಪದ್ಧತಿಯಂತೆ ಉಪನಯನ ಸಂಸ್ಕಾರ ನಡೆಯುವಾಗ ತನ್ನ ತಾಯಿ, ಸಹೋದರಿ ಮತ್ತು ಇತರ ಗೆಳೆಯರಿಗೆ ಇಲ್ಲದ ಉಪನಯನ ತನಗೂ ಬೇಡವೆಂದು ಜನಿವಾರವನ್ನು ತಿರಸ್ಕಿರಿಸಿ ಕೂಡಲ ಸಂಗಮದೆಡೆಗೆ ನಡೆದರು’ ಎಂದು ಬದಲಾಯಿಸಿದೆ.

    ಶಾಲಾ ಪಠ್ಯಪುಸ್ತಕದ ಪರಿಷ್ಕೃತ ಪ್ರತಿ ತಿದ್ದೋಲೆಯನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಮುದ್ರಣದ ಕಾರ್ಯ ಪ್ರಗತಿಯಲ್ಲಿದ್ದು, ಇನ್ನು 3 ವಾರಗಳಲ್ಲಿ ಮುದ್ರಣ ಕಾರ್ಯ ಪೂರ್ಣಗೊಳ್ಳಲಿದ್ದು ಆ ಬಳಿಕ ರಾಜ್ಯದ ಎಲ್ಲ ಶಾಲೆಗಳಿಗೆ ಪೂರೈಕೆ ಮಾಡಲಾಗುವುದು.

    | ಎಂ.ಪಿ ಮಾದೇಗೌಡ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ

    ಮುದ್ರಣ ವೆಚ್ಚ ಹೆಚ್ಚಳ: ಸರ್ಕಾರಿ ಶಾಲೆ ಮತ್ತು ಸರ್ಕಾರಿ ಅನುದಾನಿತ ಶಾಲೆ ಸೇರಿ ಒಟ್ಟು 63 ಸಾವಿರ ಶಾಲೆಗಳಿಗೆ ಉಚಿತವಾಗಿ ಒಂದೊಂದು ಬುಕ್​ಲೆಟ್ ನೀಡಲಾ ಗುತ್ತದೆ. ಕಳೆದ ಬಾರಿ ಹೋಲಿಕೆ ಮಾಡಿದರೆ ಈ ಬಾರಿ ಪಠ್ಯಪುಸ್ತಕ ಮುದ್ರಣಕ್ಕೆ 6 ರಿಂದ 7 ಕೋಟಿ ರೂ. ಅಧಿಕ ವೆಚ್ಚವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಸುಮಾರು 200 ಕೋಟಿ ರೂ. ಖರ್ಚಾಗಿದೆ. ಕಳೆದ ಬಾರಿ 193 ಕೋಟಿ ರೂ.ಗಳಷ್ಟು ಖರ್ಚಾಗಿತ್ತು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts