ಚಾಹಲ್​ ಬಳಿ ಹೋಗಿ ಆ ಒಂದು ಮಾತು ಹೇಳಿದೆ... KKR ವಿರುದ್ಧ ಗೆಲುವಿನ ಸೀಕ್ರೆಟ್​ ಬಿಚ್ಚಿಟ್ಟ ಅಯ್ಯರ್​! Shreyas Iyer

Shreyas Iyer
Published on

Shreyas Iyer : ನಿನ್ನೆ (ಏಪ್ರಿಲ್​ 15) ಕೋಲ್ಕತ ನೈಟ್​ ರೈಡರ್ಸ್ (KKR) ವಿರುದ್ಧ ನಡೆದ​ ಐಪಿಎಲ್ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ 16 ರನ್‌ಗಳಿಂದ ದಾಖಲೆಯ ಗೆಲುವು ಸಾಧಿಸಿತು. ಅದರಲ್ಲೂ 111 ರನ್‌ಗಳ ಸಾಧಾರಣ ಗುರಿಯನ್ನು ರಕ್ಷಿಸಿಕೊಳ್ಳುವ ಮೂಲಕ ಪಂಜಾಬ್ ಹೊಸ ಇತಿಹಾಸವನ್ನು ಸೃಷ್ಟಿಸಿತು. ಶ್ರೇಯಸ್ ಅಯ್ಯರ್​ ಪಡೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಗುರಿಯನ್ನು ರಕ್ಷಣೆ ಮಾಡಿದ ತಂಡವಾಯಿತು.

ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಲ್ಲಿ ನಡೆದ ಪಂದ್ಯದಲ್ಲಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 15.3 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನಗೊಂಡಿತು. ಪ್ರಿಯಾಂಶ್ ಆರ್ಯ (12 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ಗಳೊಂದಿಗೆ 22 ರನ್​) ಮತ್ತು ಪ್ರಭ್ಸಿಮ್ರಾನ್ ಸಿಂಗ್ (15 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 30) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ನಾಯಕ ಶ್ರೇಯಸ್ ಅಯ್ಯರ್ ಮತ್ತು ಇತರ ಎಲ್ಲ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫಲರಾದರು. ಕೆಕೆಆರ್ ಬೌಲರ್‌ಗಳಲ್ಲಿ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ ಎರಡು ವಿಕೆಟ್ ಪಡೆದರು. ಅವರೊಂದಿಗೆ ನೋರ್ತೇಜ್ ಮತ್ತು ವೈಭವ್ ಅರೋರಾ ತಲಾ ಒಂದು ವಿಕೆಟ್ ಪಡೆದರು.

112 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್​ಗೆ ಪಂಜಾಬ್ ವೇಗಿ ಮಾರ್ಕೊ ಜಾನ್ಸೆನ್ ಮೊದಲ ಓವರ್‌ನಲ್ಲಿ ಭಾರಿ ಆಘಾತ ನೀಡಿದರು. ಫಾರ್ಮ್‌ನಲ್ಲಿದ್ದ ಬ್ಯಾಟ್ಸ್‌ಮನ್ ಸುನೀಲ್​ ನಾರಾಯಣ್​ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರದ ಓವರ್​ನಲ್ಲಿ ಮತ್ತೊಬ್ಬ ವೇಗಿ ಕ್ಸೇವಿಯರ್​ ಬಾರ್ಟ್ಲೆಟ್, ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು. ಅದಾದ ನಂತರ, ರಘುವಂಶಿ ಮತ್ತು ನಾಯಕ ಅಜಿಂಕ್ಯಾ ರಹಾನೆ ಇನ್ನಿಂಗ್ಸ್ ಸುಧಾರಿಸಲು ಪ್ರಯತ್ನಿಸಿದರು. ಆ ಸಮಯದಲ್ಲಿ, ದಾಳಿಗೆ ಇಳಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಂದ್ಯದ ಮುಖವನ್ನೇ ಬದಲಾಯಿಸಿದರು. ರಹಾನೆ, ರಿಂಕು ಸಿಂಗ್, ರಮಣದೀಪ್ ಹಾಗೂ ರಘುವಂಶಿ ವಿಕೆಟ್​ ಕಬಳಿಸಿದರು. ಕೊನೆಯಲ್ಲಿ ಮಾರ್ಕೊ ಜಾನ್ಸೆನ್ ಅವರು ವಿನಾಶಕಾರಿ ಬ್ಯಾಟ್ಸ್‌ಮನ್ ರಸೆಲ್ ಅವರನ್ನು ಔಟ್ ಮಾಡಿ ತಮ್ಮ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. 3.1 ಓವರ್‌ಗಳನ್ನು ಬೌಲಿಂಗ್ ಮಾಡಿದ ಮಾರ್ಕೊ ಜಾನ್ಸೆನ್ ಕೇವಲ 17 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.

ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್​ ಅಯ್ಯರ್, ಈ ಗೆಲುವನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ. ಚೆಂಡು ಸಾಕಷ್ಟು ತಿರುವು ಪಡೆಯುವುದನ್ನು ನಾನು ಗಮನಿಸಿದೆ. ಈ ಬಗ್ಗೆ ಚಾಹಲ್​ ಬಳಿ ಮಾತನಾಡಿ, ತನ್ನ ಉಸಿರಾಟವನ್ನು ಸ್ವಲ್ಪ ನಿಯಂತ್ರಿಸುವಂತೆ ಕೇಳಿಕೊಂಡೆ. ಅಂದರೆ, ಕೂಲ್​ ಆಗಿ ಬೌಲಿಂಗ್​ ಮಾಡಲು ಹೇಳಿದೆ. ನಾವೀಗ ಈ ಪಂದ್ಯದ ಬಗ್ಗೆ ಮಾತನಾಡುವುದು ಕೊಂಚ ಕಷ್ಟ ಮತ್ತು ಇಂತಹ ಗೆಲುವುಗಳು ನಮ್ಮನ್ನು ವಿಶೇಷವಾಗಿಸುತ್ತವೆ ಎಂದು ಅಯ್ಯರ್ ಹೇಳಿದರು.

ನಾನು ಬ್ಯಾಟಿಂಗ್ ಮಾಡಲು ಹೋದಾಗ, ಕೇವಲ ಎರಡು ಎಸೆತಗಳನ್ನು ಎದುರಿಸಿದೆ. ಒಂದು ಚೆಂಡು ತುಂಬಾ ಕೆಳಕ್ಕೆ ಬಂದಿತು. ಇನ್ನೊಂದು ಚೆಂಡು ಬ್ಯಾಟ್‌ನ ತುದಿಗೆ ಬಡಿಯಿತು. ಬ್ಯಾಟ್ಸ್‌ಮನ್‌ಗಳಿಗೆ ಸ್ವೀಪ್ ಮಾಡುವಲ್ಲಿ ತೊಂದರೆಯಾಯಿತು. ಇದರರ್ಥ ಪಿಚ್‌ನಲ್ಲಿ ಬೌನ್ಸ್ ಸ್ಥಿರವಾಗಿರಲಿಲ್ಲ. ನಿಜ ಹೇಳಬೇಕೆಂದರೆ, ನಾವು ಚೆನ್ನಾಗಿ ಸ್ಕೋರ್ ಮಾಡಿದ್ದೇವೆ. ನಾವು 16 ರನ್‌ಗಳಿಂದ ಗೆದ್ದಿದ್ದೇವೆ ಎಂದು ಅಯ್ಯರ್ ಹೇಳಿದರು.

ಬೌನ್ಸ್ ಸ್ಥಿರವಾಗಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು ನಾನು ಬೌಲರ್‌ಗಳಿಗೆ ಹೇಳಿದೆ. ಅವರು ಯೋಜನೆಯನ್ನು ಚೆನ್ನಾಗಿ ಕಾರ್ಯಗತಗೊಳಿಸಿದರು. ಮೊದಲ ಎರಡು ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದ ನಂತರ, ನಾವು ಪಂದ್ಯವನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿತ್ತು. ಅಜಿಂಕ್ಯಾ ರಹಾನೆ ಮತ್ತು ರಘುವಂಶಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರಿಂದ, ಗೆಲುವು ನಮ್ಮಿಂದ ದೂರವಿದ್ದಂತೆ ತೋರುತ್ತಿತ್ತು. ಆದರೆ, ನಂತರ ಚಾಹಲ್ ಬಂದು ಮ್ಯಾಜಿಕ್​ ಮಾಡಿದರು ಎಂದು ಅಯ್ಯರ್​ ಹೇಳಿದರು.

ಕೋಲ್ಕತ ವಿರುದ್ಧದ ಗೆಲುವಿನ ನಂತರ ತಂಡದ ಸದಸ್ಯರು ವಿನಮ್ರರಾಗಿರಲು ನಾನು ಸಲಹೆ ನೀಡಿದ್ದೇನೆ. ಈ ಪಂದ್ಯದಲ್ಲಿ ಮಾಡಿದ ತಪ್ಪುಗಳಿಂದ ನಾವು ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯಗಳಲ್ಲಿ ಅವುಗಳನ್ನು ಪುನರಾವರ್ತಿಸದಂತೆ ನೋಡಿಕೊಳ್ಳುತ್ತೇವೆ ಎಂದು ಅಯ್ಯರ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net