

BRB Frist Blood : ಅಭಿನಯ ಚಕ್ರವರ್ತಿ, ಬಾದ್ಷಾ ಕಿಚ್ಚ ಸುದೀಪ್ ಅಭಿಮಾನಿಗಳು ಇದುವರೆಗೂ ಎದುರು ನೋಡುತ್ತಿದ್ದ ಆ ಒಂದು ಕ್ಷಣ ಕೊನೆಗೂ ಬಂದೇ ಬಿಡ್ತು. ಇದೇನು ಇಂದು ಅಥವಾ ನಿನ್ನೆಯದ್ದಲ್ಲ, ಅಷ್ಟೇ ಯಾಕೆ ಒಂದೆರೆಡು ವರ್ಷಗಳ ಕಾಯುವಿಕೆಯೂ ಅಲ್ಲ, ಬರೋಬ್ಬರಿ 7 ವರ್ಷಗಳಿಂದ ಈ ಒಂದು ಸಿನಿಮಾಗಾಗಿ ಅಭಿಮಾನಿಗಳು ಬಹಳ ಆಸೆಯಿಂದ ಎದುರು ನೋಡುತ್ತಿದ್ದರು. ಯಾವಾಗ ಶೂಟಿಂಗ್ ಶುರುವಾಗುತ್ತೆ ಅಂತ ಕಾಯುತ್ತಿದ್ದರು. ಇಷ್ಟು ವರ್ಷಗಳಾದ್ರೂ ಸಿನಿಮಾದ ಕ್ರೇಜ್ ಮಾತ್ರ ಕಮ್ಮಿಯಾಗಿರಲಿಲ್ಲ. ಪ್ರತಿ ಬಾರಿ ಸಿನಿಮಾದ ಅಪ್ಡೇಟ್ ಕೇಳುತ್ತಿದ್ದರು. ಇದೀಗ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.
ಹೌದು, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬಿಲ್ಲ ರಂಗ ಬಾಷ (ಬಿಆರ್ಬಿ) ಸಿನಿಮಾದ ಶೂಟಿಂಗ್ ಇಂದಿನಿಂದ ಆರಂಭವಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಇಂದು ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ಸುದೀಪ್, ಇಂದಿನಿಂದ ಶೂಟಿಂಗ್ ಶುರುವಾಗುತ್ತಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಕೊನೆಗೂ ಬಹುನಿರೀಕ್ಷಿತ ಸಿನಿಮಾ ಸೆಟ್ಟೇರಿತು ಎಂದು ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ.
ಬಿಲ್ಲ ರಂಗ ಬಾಷ ಸಿನಿಮಾ 2018ರಲ್ಲೇ ಘೋಷಣೆಯಾಯಿತು. ವಿಕ್ರಾಂತ್ ರೋಣ ಸಿನಿಮಾಗೂ ಮುಂಚೆಯೇ ಅನೂಪ್ ಅವರು ಬಿಆರ್ಬಿ ಸಿನಿಮಾವನ್ನು ಘೋಷಣೆ ಮಾಡಿದ್ದರು. ಆದರೆ, ಆಗಿನ್ನು ಸ್ಕ್ರಿಪ್ಟ್ ಕೆಲಸ ಇನ್ನೂ ಪೂರ್ಣಗೊಂಡಿರಲಿಲ್ಲ. ಅಲ್ಲದೆ, ಇದೊಂದು ಫ್ಯೂಚರಿಸ್ಟಿಕ್ ಸಿನಿಮಾ ಆಗಿದ್ದು, ಸಾಕಷ್ಟು ಪ್ಲಾನಿಂಗ್ ಬೇಕಿತ್ತು ಮತ್ತು ಬಿಗ್ ಬಜೆಟ್ ಸಿನಿಮಾ ಆಗಿದ್ರಿಂದ ಸಾಕಷ್ಟು ತಯಾರಿ ಬೇಕಿತ್ತು. ಈ ಕಾರಣಕ್ಕೆ ಈ ಸಿನಿಮಾವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದರು. ಇದರ ನಡುವೆ ವಿಕ್ರಾಂತ್ ರೋಣ ಸಿನಿಮಾ ಮಾಡಿದರು. ಅಂದಹಾಗೆ, ವಿಕ್ರಾಂತ್ ರೋಣ ಸಿನಿಮಾ ಸುದೀಪ್ ಅವರಿಗಾಗಿ ಬರೆದ ಕತೆಯಲ್ಲ. ಆದರೆ, ಸುದೀಪ್ ಅವರಿಗೆ ಆ ಕತೆ ಇಷ್ಟ ಆಗಿ ತಾವೇ ಆ ಸಿನಿಮಾ ಮಾಡಿದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.
ಇದೀಗ ಬಿಆರ್ಬಿ ಶೂಟಿಂಗ್ ಆರಂಭವಾಗಿದ್ದು, ಕ್ರೇಜ್ ಡಬಲ್ ಆಗಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಕ್ಕೆ ಮುತ್ತಿಗೆ ಹಾಕಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬಿಆರ್ಬಿ ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದೆ. ಹೊಸ ಪೋಸ್ಟರ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾ ಗ್ಯಾರಂಟಿ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಹೊಸ ಅಧ್ಯಾಯ ಶುರು ಎಂದು ಕೊಂಡಾಡುತ್ತಿದ್ದಾರೆ.
ಕಳೆದ ಸೆ.2ರಂದು ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಅವರು ಬಿಲ್ಲ ರಂಗ ಬಾಷ ಸಿನಿಮಾದ ಕಾನ್ಸೆಪ್ಟ್ ಟೀಸರ್ ರಿಲೀಸ್ ಮಾಡಿದ್ದರು. ವಿಡಿಯೋದಲ್ಲಿ ಹಿಮ, ಮರುಭೂಮಿ, ಹಸಿರು ಪ್ರದೇಶಗಳು ಕಂಡುಬಂದಿವೆ. ಅದೆಲ್ಲಾ ನೋಡಿದ್ರೆ ಬಹುಶಃ ಸುದೀಪ್ ಅವರು ಮೂರು ಕಾಲಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿಯೇ ಇದೆ.
ಅಂದಹಾಗೆ ಬಿಲ್ಲ ರಂಗ ಬಾಷಾ ಸಿನಿಮಾ ಕಥೆಯು 2209 A.D ನಲ್ಲಿ ನಡೆಯುತ್ತದೆ. ಅಂದರೆ ಮುಂದಿನ 200 ವರ್ಷಗಳ ಕಾಲ್ಪನಿಕ ಕತೆ ಇದಾಗಿದ್ದು, ಸ್ಟೋರಿ ಲೈನ್ನಿಂದಲೇ ಬಿಲ್ಲ ರಂಗ ಬಾಷ ಸಿನಿಮಾ ಅಭಿಮಾನಿಗಳಲ್ಲಿ ಹೊಸ ಕಿಚ್ಚು ಹುಟ್ಟುಹಾಕಿದೆ. ಕನ್ನಡದ ಮಟ್ಟಿಗೆ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಅವರು ಕೈಹಾಕಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಹನುಮಾನ್ ಸಿನಿಮಾ ನಿರ್ಮಾಣ ಮಾಡಿದ್ದ ನಿರಂಜನ್ ರೆಡ್ಡಿ ಮತ್ತು ರೆಡ್ಡಿ ಚೈತನ್ಯ ರೆಡ್ಡಿ, ಪ್ರೈಮ್ ಶೋ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ.