ದಯವಿಟ್ಟು ರಾಯುಡುರನ್ನು ಟ್ರೋಲ್​ ಮಾಡುವುದನ್ನು ನಿಲ್ಲಿಸಿ; ಫ್ಯಾನ್ಸ್​ಗೆ ಮನವಿ ಮಾಡಿದ ಮಾಜಿ ಕ್ರಿಕೆಟಿಗ

Ambati Rayudu
Published on

ನವದೆಹಲಿ: ರಂಗು ರಂಗಿನ ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ ಮುಕ್ತಾಯಗೊಂಡಿದ್ದು, 17ನೇ ಆವೃತ್ತಿಯ ಟೂರ್ನಿಯು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಹಾಗೆ ನೋಡಿದರೆ ಆರ್ಸಿಬಿ ಹಾಗೂ ವಿರಾಟ್​ ಕೊಹ್ಲಿಯನ್ನು ನಿರಂತರವಾಗಿ ಟೀಕಿಸಿ ಸುದ್ದಿಯಾಗಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಈಗ ಮತ್ತೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಅದು ಕೂಡ ಮಾಜಿ ಕ್ರಿಕೆಟಿಗ ಮಾಡಿರುವ ಮನವಿ ಮೇರೆಗೆ.

ಐಪಿಎಲ್​ ಆರಂಭವಾದಾಗಿನಿಂದಲೂ ಆರ್​ಸಿಬಿ ಹಾಗೂ ವಿರಾಟ್​ ಕೊಹ್ಲಿ ಕುರಿತು ನಿರಂತರವಾಗಿ ಟೀಕಿಸುತ್ತ ಅಂಬಾಟಿ ರಾಯುಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಲ್ಲದೆ ಲೈವ್​ನಲ್ಲೇ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್​ ಅಂಬಾಟಿ ರಾಯುಡುರನ್ನು ಟ್ರೋಲ್​ ಮಾಡದಂತೆ ಮನವಿ ಮಾಡಿದ್ದಾರೆ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಆಟಗಾರರ ವಿರುದ್ಧ ಮೊದಲು ಇದನ್ನು ನಿಲ್ಲಿಸಬೇಕು. ಫೈನಲ್​ನಲ್ಲಿ ನಾನು ಹಾಗೂ ಅಂಬಾಟಿ ನಡುವಿನ ಮಾತುಕತೆಯೂ ದೊಡ್ಡ ಟ್ರೋಲ್​ ಆಗಿ ಮಾರ್ಪಟ್ಟಿದ್ದು, ದಯವಿಟ್ಟು ಇದನ್ನು ಮೊದಲು ನಿಲ್ಲಿಸಿ ಎಂದು ವಿನಂತಿಸಿದ್ದಾರೆ.

ಟ್ರೋಲ್​ ಆಗುವುದಕ್ಕೆ ಕಾರಣವೇನು?

ಪಂದ್ಯ ಶುರುವಾಗುವುದಕ್ಕೂ ಮುನ್ನ ಅಂಬಾಟಿ ರಾಯುಡು ತಾವು ಎಸ್​ಆರ್​ಎಚ್​ ತಂಡವನ್ನು ಬೆಂಬಲಿಸುತ್ತಿರುವುದಾಗಿ ಹೇಳಿದ್ದರು. ಕೆವಿನ್​ ಪೀಟರ್ಸನ್​ ಕೆಕೆಆರ್ ಬೆಂಬಲಿಸುತ್ತಿರುವುದಾಗಿ ಹೇಳಿದರು. ಮಾತನಾಡುವ ವೇಳೆ ರಾಯುಡು ಕೊಹ್ಲಿಯನ್ನು ಟೀಕಿಸಲು ಶುರು ಮಾಡಿದರು. ಈ ವೇಳೆ ಇದಕ್ಕೆ ನಗುತ್ತಲೇ ಉತ್ತರಿಸಿದ ಕೆವಿನ್​ ರಾಯುಡುರನ್ನು ಜೋಕರ್​ ಎಂದು ಕರೆದಿದ್ದರು. ಇದು ವ್ಯಾಪಕ ಟ್ರೋಲ್​ ಆಗಿತ್ತು.

ಪಂದ್ಯ ಮುಗಿದ ಬಳಿಕ ತಾವು ಎರಡು ತಂಡಗಳನ್ನು ಬೆಂಬಲಿಸುತ್ತಿರುವುದಾಗಿ ಹೇಳಿದ ರಾಯುಡು ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ವ್ಯಾಪಕವಾಗಿ ಟ್ರೋಲ್​ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೀಟರ್ಸನ್​ ಟ್ರೋಲ್​ ಮಾಡದಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net