ಕೋಚ್​ ಹುದ್ದೆ ಅಲಂಕರಿಸಲು ಸಿದ್ಧ; ಆದರೆ... ಬಿಸಿಸಿಐಗೆ ಷರತ್ತು ವಿಧಿಸಿದ ಗೌತಮ್​ ಗಂಭೀರ್

Gautham Gambhir
Published on

ನವದೆಹಲಿ: ಜೂನ್​ 01ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್​ ಬಳಿಕ ಹಾಲಿ ಕೋಚ್​ ರಾಹುಲ್​ ದ್ರಾವಿಡ್​ ಅವರ ಒಪ್ಪಂದ ಕೊನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಬಿಸಿಸಿಐ ಕೋಚ್​ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹಲವು ಮಾಜಿ ಆಟಗಾರರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಇದರಲ್ಲಿ ಪ್ರಮುಖವಾಗಿ ಗೌತಮ್​ ಗಂಭೀರ್ ಅವರ ಹೆಸರು ಕೇಳಿ ಬರುತ್ತಿದೆ.

ಟೀಮ್ ಇಂಡಿಯಾದ ಕೋಚ್ ಸ್ಥಾನದ ಮೇಲೆ ದೇಶ ಹಾಗೂ ವಿದೇಶಿ ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ವೇಳೆ ಹೆಡ್ ಕೋಚ್‌ ಸ್ಥಾನಕ್ಕೆ ಕೆಕೆಆರ್​ ತಂಡದ ಮೆಂಟರ್ ಗೌತಮ್​ ಗಂಭೀರ್​ ಅವರು ಕಣ್ಣಿಟ್ಟಿದ್ದು, ಅವರು ಒಂದು ಷರತ್ತನ್ನು ವಿಧಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇತ್ತ ಬಿಸಿಸಿಐ ಕೂಡ ಗಂಭೀರ್​ರನ್ನು ಕೋಚ್​ ಆಗಿ ನೇಮಿಸುವ ಕುರಿತು ಉತ್ಸುಕತೆ ತೋರುತ್ತಿದ್ದು, ಮೇ 27ರಂದು ಅಂತಿಮ ಚಿತ್ರಣ ಹೊರಬೀಳಲಿದೆ.

ಖ್ಯಾತ ಕ್ರೀಡಾ ವಾಹಿನಿ ವರದಿ ಮಾಡಿರುವ ಪ್ರಕಾರ ಟೀಮ್​ ಇಂಡಿಯಾ ಕೋಚ್​ ಹುದ್ದೆ ಅಲಂಕರಿಸಲು ಗೌತಮ್​ ಗಂಭೀರ್​ ಸಿದ್ದರಾಗಿದ್ದು, ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಅವರು ಬಿಸಿಸಿಐಗೆ ಒಂದು ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗಿದೆ. ಕೋಚ್​ ಹುದ್ದೆಗೆ ತಮ್ಮ ಆಯ್ಕೆಯನ್ನು ಖಚಿತಪಡಿಸಿದರೆ ಮಾತ್ರ ಸ್ಥಾನ ಅಲಂಕರಿಸುವುದಾಗಿ ಗಂಭೀರ್​ ಕೇಳಿದ್ದಾರೆ ಎಂದು ಹೇಳಲಾಗಿದೆ. ಈ ಷರತ್ತನ್ನು ಬಿಸಿಸಿಐ ಒಪ್ಪಿದರೆ ಮಾತ್ರ ಕೋಚ್​ ಹುದ್ದೆ ಅಲಂಕರಿಸುವುದಾಗಿ ಗೌತಮ್​ ಹೇಳಿರುವುದಾಗಿ ವರದಿಯಾಗಿದೆ. ಈ ಸಂಬಂಧ ಬಿಸಿಸಿಐನ ಸದಸ್ಯರು ಒಂದು ಸುತ್ತಿನ ಸಭೆ ನಡೆಸಿದ್ದು, ಅಂತಿಮವಾಗಿ ಮೇ 27ರಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಕೆಕೆಆರ್​ ತಂಡದ ಮೆಂಟರ್​ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್​ ಟೀಮ್​ಅನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ತಂಡದ ಸಂಯೋಜನೆ ವಿಚಾರಕ್ಕೆ ಹೆಚ್ಚು ಗಮನ ಸೆಳೆದಿರುವ ಗಂಭೀರ್​ ಟೀಮ್​ ಇಂಡಿಯಾ ಕೋಚ್​ ಸ್ಥಾನಕ್ಕೆ ಹಾಟ್​ ಫೇವರಿಟ್​ ಎನ್ನಿಸಿದ್ದಾರೆ. ಅಂತಿಮವಾಗಿ ಟೀಮ್​ ಇಂಡಿಯಾ ಕೋಚ್​ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net