

ನವದೆಹಲಿ: ಅ. 5ರಿಂದ ಆರಂಭವಾದ ಏಕದಿನ ವಿಶ್ವಕಪ್ ಹಬ್ಬ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಗಿಯುವ ಹಂತಕ್ಕೆ ಬಂದಿದ್ದು, ಇದೀಗ ಎಲ್ಲೆಡೆ ಸಮಿಫೈನಲ್ ಫೀವರ್ ಶುರುವಾಗಿದೆ. ಸಮೀಸ್ ಹಂತಕ್ಕೆ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದ್ದರೆ, 2 ಮತ್ತು 3ನೇ ಸ್ಥಾನದಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿವೆ. ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಇದೆ. ಪಾಕಿಸ್ತಾನಕ್ಕೆ ಇನ್ನೂ ಒಂದು ಪಂದ್ಯ ಬಾಕಿ ಇರುವುದರಿಂದ ಸಮೀಸ್ ಆಸೆ ಜೀವಂತವಾಗಿದೆ. ಆದರೆ, ಈ ಆಸೆ, ಆಸೆಯಾಗೇ ಉಳಿಯಲಿದೆ ಎಂಬುದನ್ನು ಅಂಕಿ-ಅಂಶಗಳು ನಿರೂಪಿಸಿವೆ. ಬಾಬರ್ ಅಜಾಮ್ ಪಡೆ ತಿಪ್ಪರಲಾಗ ಹೊಡೆದರೂ ಸಮೀಸ್ ಕನಸು ನನಸಾಗುವುದು ಅಸಾಧ್ಯ. ಒಂದರ್ಥದಲ್ಲಿ ಹೇಳುವುದಾದರೆ, ಪಾಕ್ ಪಾಲಿಗೆ ಭಾರೀ ಪವಾಡವೇ ನಡೆಯಬೇಕಿದೆ.
ಪಾಕ್ ಸಮೀಸ್ ಹಾದಿ ಬಹುತೇಕ ಬಂದ್
ಇಂದು (ನ.9) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ 41ನೇ ಹಾಗೂ ನ್ಯೂಜಿಲೆಂಡ್ ತಂಡದ ಲೀಗ್ ಹಂತದ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಿವೀಸ್ ಪಡೆ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದ್ದು, ಪಾಕ್ ತಂಡದ ಸಮೀಸ್ ಹಾದಿಯನ್ನು ಬಹುತೇಕ ಮುಚ್ಚಿದೆ. ಲಂಕಾ ನೀಡಿದ್ದ 172 ರನ್ಗಳ ಗುರಿಯನ್ನು ಕಿವೀಸ್ ಪಡೆ ಕೇವಲ 23.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ತಲುಪಿದ್ದು, ಪಾಕ್ ಸಮೀಸ್ ಹಾದಿಗೆ ತಣ್ಣೀರೆರಚಿದೆ.
ಪಾಕ್ ಮುಂದಿರುವುದು ಅಂತಿಂಥ ಸವಾಲಲ್ಲ!
ಸದ್ಯ ಕಿವೀಸ್ ಪಡೆದ ಲಂಕಾದೊಂದಿಗೆ ದಾಖಲೆಯ ಜಯದೊಂದಿಗೆ ಸಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪಾಕ್ ಸಮೀಸ್ ಸ್ಥಾನ ಕಿವೀಸ್ ಫಲಿತಾಂಶದ ಮೇಲೆ ಅವಲಂಬಿತವಾಗಿತ್ತು. ಈಗಲೂ ಪಾಕಿಸ್ತಾನಕ್ಕೆ ಸಮೀಸ್ ಪ್ರವೇಶ ಪಡೆಯಲು ಅವಕಾಶವಿದ್ದರೂ ವಾಸ್ತವವಾಗಿ ಕಿವೀಸ್ ನಾಕೌಟ್‌ಗೆ ಅರ್ಹತೆ ಪಡೆಯುವ ನಾಲ್ಕನೇ ಮತ್ತು ಅಂತಿಮ ತಂಡವಾಗಿದೆ. ಪಾಕ್ ಸಮೀಸ್ ಹಾದಿ ಪಡೆಯಲು ಇರುವ ಅಸಾಧ್ಯದ ಲೆಕ್ಕಾಚಾರ ಹೀಗಿದೆ. ನ.11ರಂದು ಪಾಕ್, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದು ಉಭಯ ತಂಡಗಳ ಅಂತಿಮ ಲೀಗ್ ಪಂದ್ಯವಾಗಿದೆ. ಒಂದು ವೇಳೆ ಪಾಕ್ ಮೊದಲ ಬ್ಯಾಟ್ ಮಾಡಿದರೆ 300 ರನ್ಗಳ ಬೃಹತ್ ಗುರಿ ನೀಡಿ, ಎದುರಾಳಿ ತಂಡವನ್ನು ಕೇವಲ 13 ರನ್ಗೆ ಕಟ್ಟಿಹಾಕಬೇಕಿದೆ. ಒಂದು ವೇಳೆ ಪಾಕ್ ಮೊದಲು ಬೌಲಿಂಗ್ ಮಾಡಿದರೆ, ಇಂಗ್ಲೆಂಡ್ ತಂಡವನ್ನು ಕೇವಲ 50 ರನ್ಗಳಿಗೆ ಕಟ್ಟಿಹಾಕಿ, ಕೇವಲ 2.3 ಓವರ್ಗಳಲ್ಲಿ 50 ರನ್ಗಳನ್ನು ಗಳಿಸಬೇಕಿದೆ. ಆದರೆ, ಇದು ಅಸಾಧ್ಯದ ಮಾತು. ಅಷ್ಟಕ್ಕೂ ಪಾಕ್ ಎದುರಿಸುತ್ತಿರುವ ತಂಡ ಕಿಕೆಟ್ ಶಿಶುವಲ್ಲ ಬದಲಾಗಿ ಕ್ರಿಕೆಟ್ ಜನಕನಾಗಿದ್ದು, ಪಾಕ್ ಸಮೀಸ್ ಆಸೆಯನ್ನು ಮರೆಯುವುದೇ ಒಳಿತು.
ಸಮೀಸ್ನಲ್ಲಿ ಮುಖಾಮುಖಿಯಾಗುವ ತಂಡಗಳು
ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಮೀಸ್ ಪ್ರವೇಶ ಪಡೆದಿದ್ದು, ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್ನಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ನ.19ಕ್ಕೆ ವಿಶ್ವಕಪ್ ಹಬ್ಬಕ್ಕೆ ವಿದ್ಯುಕ್ತ ತೆರೆ
ಎರಡೂ ಸಮಿಫೈನಲ್ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್ ಟ್ರೋಫಿಯ ಜತೆಗೆ 4 ಮಿಲಿಯನ್ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್ ಅಪ್ ತಂಡಗಳು 2 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಹಾಗೂ ಲೀಗ್ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್)