

ನವದೆಹಲಿ: ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಆಡಿದ ಎಂಟು ಪಂದ್ಯಗಳಲ್ಲಿಯೂ ಅಮೋಘ ಗೆಲುವು ಸಾಧಿಸಿ, ಅಜೇಯ ಓಟದೊಂದಿಗೆ ಸೆಮಿಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಪಾತ್ರವಾಗಿದೆ. ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಲು ಟೀಮ್ ಇಂಡಿಯಾಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇಡೀ ಟೂರ್ನಿಯಲ್ಲಿ ಭಾರತವೇ ಬಲಿಷ್ಠ ತಂಡ ಎಂಬ ಅಭಿಪ್ರಾಯವಿದ್ದು, ಈ ಬಾರಿ ಟ್ರೋಫಿ ಎತ್ತಿಹಿಡಿಯುವ ನೆಚ್ಚಿನ ತಂಡವಾಗಿದೆ.
ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ರೋಹಿತ್ ಪಡೆಯ ಅಶ್ವಮೇಧ ಓಟವನ್ನು ಈವರೆಗೂ ಯಾರೊಬ್ಬರು ಕಟ್ಟಿಹಾಕಿಲ್ಲ. ನಾನಾ ತಂತ್ರಗಳನ್ನು ಎಣೆದರೂ ಕೂಡ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯದ ಮುಂದೆ ಯಾವುದೂ ಫಲಿಸುತ್ತಿಲ್ಲ. ಇದೀಗ ಸೆಮಿಫೈನಲ್ನಲ್ಲಿ ಭಾರತವನ್ನು ಕಟ್ಟಿಹಾಕಲು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
ಫಾಕ್ಸ್ ಕ್ರಿಕೆಟ್ ಮಾಧ್ಯಮದೊಂದಿಗೆ ಮಾತನಾಡುವಾಗ ಸಮಿಫೈನಲ್ನಲ್ಲಿ ಭಾರತವನ್ನು ಸಮರ್ಥವಾಗಿ ಎದುರಿಸಲು ಇರುವ ತಂತ್ರವನ್ನು ಗಿಲ್‌ಕ್ರಿಸ್ಟ್ ವಿವರಿಸಿದ್ದಾರೆ. ಮೊದಲನೆಯದಾಗಿ ಭಾರತದ ವಿರುದ್ಧ ಯಾರೂ ಸಮಿಫೈನಲ್ನಲ್ಲಿ ಕಾದಾಡುತ್ತಾರೋ ಆ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರನೊಂದಿಗೆ ಚೇಸಿಂಗ್‌ನಲ್ಲಿ ಭಾರತ ತಂಡ ಪ್ರಾವೀಣ್ಯತೆಯನ್ನು ಹೊಂದಿರುವುದು ಎಲ್ಲರಿಗೂ ತಿಳಿದೇ ಇದೆ. ಇದನ್ನು ಸ್ವತಃ ಗಿಲ್‌ಕ್ರಿಸ್ಟ್ ಸಹ ಒಪ್ಪಿಕೊಂಡಿದ್ದಾರೆ. ಆದರೆ, ಗಿಲ್‌ಕ್ರಿಸ್ಟ್ ಪ್ರಕಾರ ಮೊದಲ ಬ್ಯಾಟಿಂಗ್ ಆಯ್ದುಕೊಂಡು ಭಾರತಕ್ಕೆ ಬೃಹತ್ ಮೊತ್ತದ ಗುರಿಯನ್ನು ನೀಡುವುದರ ಹಿಂದಿನ ಕಾರ್ಯತಂತ್ರದ ಪ್ರಯೋಜನವನ್ನು ಗಿಲ್ ಕ್ರಿಸ್ಟ್ ವಿವರಿಸಿದರು.
ಭಾರತದ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಗಿಲ್‌ಕ್ರಿಸ್ಟ್, ವಿಶೇಷವಾಗಿ ರಾತ್ರಿ ಸಮಯದಲ್ಲಿ ಬೌಲರ್ಗಳ ಬೌಲಿಂಗ್ ದಾಳಿಯ ಪರಿಣಾಮಕತ್ವವನ್ನು ಒತ್ತಿ ಹೇಳಿದರು. ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬೂಮ್ರಾರಂತಹ ತ್ರಿಮೂರ್ತಿ ಬೌಲರ್ಗಳನ್ನು ಗಿಲ್ ಮೆಚ್ಚಿಕೊಂಡರು. ಅಲ್ಲದೆ, ರಾತ್ರಿಗಿಂತ ಹಗಲಿನ ಪರಿಸ್ಥಿತಿಯಲ್ಲಿ ಈ ಅಸಾಧಾರಣ ಬೌಲರ್ಗಳನ್ನು ಎದುರಿಸುವುದು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ರಾತ್ರಿಯ ಸಮಯದಲ್ಲಿ ಭಾರತೀಯ ಬೌಲರ್ಗಳ ಎಸೆತ ತುಂಬಾ ಮಾರಕವಾಗಿರುತ್ತದೆ. ಈ ವೇಳೆ ಅವರ ಎಸೆತಗಳನ್ನು ಎದುರಿಸುವು ಬಹುತೇಕ ಕಷ್ಟ. ಹೀಗಾಗಿ ಹಗಲಿನ ವೇಳೆ ಅವರನ್ನು ಎದುರಿಸುವುದು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮತೋಲನವನ್ನು ಗಿಲ್ ಕೊಂಡಾಡಿದರು. ಪ್ರತಿಭಾವಂತ ವೇಗಿಗಳ ಜತೆಗೆ ಸ್ಪಿನ್ನಲ್ಲಿನ ವೈವಿಧ್ಯತೆ ಭಾರತಕ್ಕೆ ಪ್ಲಸ್ ಆಗಿದೆ. ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಸ್ಪಿನ್ ಯಾವುದೇ ಎದುರಾಳಿಗಳನ್ನು ವಿಚಲಿತಗೊಳಿಸುತ್ತದೆ. ಆರಂಭಿಕ, ಮಧ್ಯಮ ಮತ್ತು ಅಂತಿಮ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ಲೈನಪ್ ಅದ್ವಿತೀಯವಾಗಿದೆ. ಅಲ್ಲದೆ, ಎಲ್ಲರೂ ಉತ್ತಮ ಫಾರ್ಮ್ನಲ್ಲಿರುವುದು ಭಾರತದ ಟ್ರೋಫಿ ಎತ್ತಿಹಿಡಿಯುವ ಕನಸಿಗೆ ಪೂರಕವಾಗಿದೆ ಎಂದು ಗಿಲ್‌ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)