More

    ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ: ಮತದಾರರ ಪಟ್ಟಿಗೆ ಸೇರಿಸಲು ಮೇ.6ರವರೆಗೆ ಅವಕಾಶ

    ಮಂಡ್ಯ: ವಿಧಾನ ಪರಿಷತ್‌ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ಅರ್ಹ ಮತದಾರರ ಪರಿಷ್ಕರಣೆ ನಡೆಸಿ 2023 ಡಿ.30ರಂದು ಪಟ್ಟಿ ಪ್ರಕಟಿಸಲಾಗಿದೆ. ಅಂತೆಯೇ ಮೇ.6ರ ಸಂಜೆ 5ಗಂಟೆವರೆಗೆ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಹತೆ ಹೊಂದಿರುವ ಶಿಕ್ಷಕರು ಅಥವಾ ಹೆಸರು ಬಿಟ್ಟು ಹೋಗಿರುವವರು ಆಯಾ ತಾಲೂಕು ಕಚೇರಿಗಳಲ್ಲಿ ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಜಕೀಯ ಪಕ್ಷದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿರುತ್ತಾರೆ. ಮೇ.9ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದರು.
    ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನಾಮಪತ್ರ ನಮೂನೆ ಪಡೆದುಕೊಂಡು ಮೇ.16ರೊಳಗೆ ಸಲ್ಲಿಸಬಹುದಾಗಿದೆ. 17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 20ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂ.3ರಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು. 6ರಂದು ಮತ ಎಣಿಕೆ ನಡೆಯಲಿದೆ. ಎಲ್ಲ ಚುನಾವಣೆ ಪ್ರಕ್ರಿಯೆಗಳು ಜೂ.12ರಂದು ಪೂರ್ಣಗೊಳ್ಳುತ್ತದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತದೆ ಎಂದರು.
    4,860 ಮತದಾರರು ನೋಂದಣಿ: ಜಿಲ್ಲೆಯಲ್ಲಿ 8 ಮತಕೇಂದ್ರಗಳಿದ್ದು, ಅಂತಿಮ ಮತದಾರರ ಪಟ್ಟಿಯ ಪ್ರಕಾರ ಈವರೆಗೆ 4,860 ಮತದಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕೆ.ಆರ್.ಪೇಟೆ ಮಿನಿ ವಿಧಾನಸೌಧದ ಮತ ಕೇಂದ್ರದಲ್ಲಿ 295 ಪುರುಷ, 132 ಮಹಿಳೆ ಸೇರಿದಂತೆ ಒಟ್ಟು 427 ಮತದಾರರು, ನಾಗಮಂಗಲದಲ್ಲಿ 268 ಪುರುಷ, 132 ಮಹಿಳೆ ಸೇರಿ 400, ಪಾಂಡವಪುರದಲ್ಲಿ 228 ಪುರುಷ, 167 ಮಹಿಳೆ ಸೇರಿ 395, ಮಂಡ್ಯ ಮಿನಿ ವಿಧಾನಸೌಧ ಮತಕೇಂದ್ರದಲ್ಲಿ 534 ಪುರುಷ, 555 ಮಹಿಳೆ ಸೇರಿ 1089 ಹಾಗೂ ಮಂಡ್ಯ ತಾಪಂನ ಸಾಮರ್ಥ್ಯ ಸೌಧ ಮತಕೇಂದ್ರದಲ್ಲಿ 389 ಪುರುಷ, 291 ಮಹಿಳೆ ಸೇರಿದಂತೆ 680, ಮದ್ದೂರಿನಲ್ಲಿ 502 ಪುರುಷ, 373 ಮಹಿಳೆ ಸೇರಿದಂತೆ 875, ಶ್ರೀರಂಗಪಟ್ಟಣದಲ್ಲಿ 182 ಪುರುಷ, 201 ಮಹಿಳೆ ಸೇರಿ 383 ಹಾಗೂ ಮಳವಳ್ಳಿ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ 419 ಪುರುಷ, 192 ಮಹಿಳೆ ಸೇರಿ 611 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ವಿವರಿಸಿದರು.
    ಸಭೆಯಲ್ಲಿ ಡಿಡಿಪಿಐ ಎಚ್.ಶಿವರಾಮೇಗೌಡ, ಚುನಾವಣಾ ತಹಸೀಲ್ದಾರ್ ವೆಂಕಟಾಚಲಪತಿ, ಮಂಡ್ಯ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ವಿವಿಧ ಪಕ್ಷದ ಮುಖಂಡರಾದ ನವೀನ್‌ಕುಮಾರ್, ಬೊಮ್ಮಯ್ಯ, ಚಿದಂಬರ್, ರಮೇಶ್, ದಿನೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts