ಅಮ್ಮನಿಂದ ಮಾತ್ರ ಇದು ಸಾಧ್ಯ… ನೀರಜ್​ ಚೋಪ್ರಾ ತಾಯಿ ಹೊಗಳಿದ ಮಾಜಿ​ ಕ್ರಿಕೆಟಿಗ ಶೋಯಿಬ್ ಅಖ್ತರ್​

ವಿಜಯವಾಣಿ - 2024-08-11T171740.142
Published on

ಲಾಹೋರ್​: ಪ್ಯಾರಿಸ್​ ಒಲಿಂಪಿಕ್ಸ್ 2024ರ ಪದಕದಾಟದಲ್ಲಿ ಇತ್ತೀಚೆಗಷ್ಟೇ ಜಾವಲಿನ್ ಫೈನಲ್ ತಲುಪಿದ್ದ ಭಾರತೀಯ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್​ ನದೀಮ್ ಪೈಕಿ ಅರ್ಷದ್​ 92.97 ಮೀಟರ್‌ ಜಾವಲಿನ್​ ಎಸೆದು ಚಿನ್ನಕ್ಕೆ ಮುತ್ತಿಟ್ಟರೆ, ಭಾರತದ ಚಿನ್ನದ ಹುಡುಗ ಎಂದೇ ಕರೆಸಿಕೊಳ್ಳುವ ನೀರಜ್​ 89.45 ಮೀ. ಎಸೆದು ಬೆಳ್ಳಿ ಪದಕ ಗೆದ್ದರು. ಇವರಿಬ್ಬರ ಗೆಲುವನ್ನು ಸಂಭ್ರಮಿಸಿದ ಕ್ರೀಡಾ ಅಭಿಮಾನಿಗಳು ಎರಡು ದೇಶದ ಪ್ರತಿಭೆಗಳಿಗೆ ವಿಶೇಷ ಅಭಿನಂದನೆ, ಪ್ರಶಂಸೆ ವ್ಯಕ್ತಪಡಿಸಿದರು. ಇದೆಲ್ಲವನ್ನೂ ಮೀರಿದ್ದು ಚೋಪ್ರಾರ ತಾಯಿ ಆಡಿದ ಮಾತುಗಳು. ಅವರ ಒಂದು ಮಾತು ಎಲ್ಲರನ್ನು ಒಮ್ಮೆ ಅಚ್ಚರಿಗೆ ದೂಡಿದ್ದೇ ಆದರೂ ಅಮ್ಮನ ಹೃದಯ ಎಂತಹದ್ದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಆ.08ರಂದು ನಡೆದ ಪ್ಯಾರಿಸ್​ ಒಲಿಂಪಿಕ್ಸ್​ ಪುರುಷರ ಜಾವಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್​ ನದೀಮ್ ಚಿನ್ನದ ಪದಕ ಗೆಲ್ಲುವುದರ ಜತೆಗೆ ಹೊಸ ದಾಖಲೆಗೆ ಅಣಿಯಾದರು. ಇನ್ನು 89.45 ಮೀ. ಜಾವಲಿನ್​ ಎಸೆತದಿಂದ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ, ಭಾರತೀಯರನ್ನು ಹೆಮ್ಮೆಪಡಿಸುವುದರಲ್ಲಿ ಹಿಂದೆ ಸರಿಯಲಿಲ್ಲ. ಚಿನ್ನದ ಓಟದಲ್ಲಿ ಈ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಾಗಲೇ ಇದು ರೋಚಕವಾಗಿರಲಿದೆ ಎಂದು ಕ್ರೀಡಾ ಅಭಿಮಾನಿಗಳು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿದ್ದರು. ಆದ್ರೆ, ಅಂತಿಮವಾಗಿ ಈ ಓಟದಲ್ಲಿ ಚಿನ್ನದ ಪದಕ ಗೆಲ್ಲಲು ನೀರಜ್ ವಿಫಲರಾದರು. ತಮ್ಮ ಮಗ ಚಿನ್ನದ ಪದಕ ಗೆಲ್ಲದೇ ಹೋದರು ಬೇಸರಕ್ಕೊಳಗಾಗದ ಚೋಪ್ರಾ ತಾಯಿ, ನದೀಮ್ ಕೂಡ ನನ್ನ ಮಗನೇ ಎಂದು ಹೇಳಿರುವುದು ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಸದ್ಯ ನೀರಜ್ ಚೋಪ್ರಾ​ ತಾಯಿ ಸರೋಜಾ ದೇವಿ ಅವರು ಇದೊಂದು ಹೇಳಿಕೆಯಿಂದ ನೆಟ್ಟಿಗರ ಮನಗೆದ್ದಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂಬುದನ್ನು ಸ್ವತಃ ನೀರಜ್ ಚೋಪ್ರಾ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನನ್ನ ಅಮ್ಮ ತನ್ನ ಮನಸಿಗೆ ಏನು ಅನಿಸಿತೋ ಅದನ್ನು ನೇರವಾಗಿ ಹೇಳಿದ್ದಾರೆ. ಇದು ಇಷ್ಟೊಂದು ವೈರಲ್ ಆಗುತ್ತದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಹೇಳಿದರು. ಇನ್ನು ಸರೋಜಾ ದೇವಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್​, ಒಬ್ಬ ತಾಯಿಯಿಂದ ಮಾತ್ರ ಇಂತಹ ಮಾತು ಬರಲು ಸಾಧ್ಯ ಎಂದು ಮೆಚ್ಚಿ ಮಾತನಾಡಿದ್ದಾರೆ.

"ಚಿನ್ನ ಗೆದ್ದ ಅರ್ಷದ್​ ನದೀಮ್​ನನ್ನು ಚೋಪ್ರಾರ ತಾಯಿ ಸರೋಜಾ ದೇವಿ ಅವರು ನನ್ನ ಮಗನೇ ಎಂದಿದ್ದು ಬಹಳ ಖುಷಿ ತಂದಿತು. ಇದು ನಿಜಕ್ಕೂ ಅದ್ಭುತ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net