ವಿಶ್ವ ನಂ. 1 ಟೆನಿಸ್ ತಾರೆ ಜೋಕೊವಿಕ್ ವಿಚ್ಛೇದನ?

jelena-ristic-and-novak-djokovic
Published on

ಬೆಲ್‌ಗ್ರೇಡ್: ವಿಶ್ವ ನಂ. 1 ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೋಕೊವಿಕ್ ಪತ್ನಿ ಜೆಲೆನಾರಿಂದ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ಸಮಯದಿಂದ ಓಡಾಡುತ್ತಿದೆ. ವರ್ಷಾರಂಭದ ಗ್ರಾಂಡ್ ಸ್ಲಾಂ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ತೆರಳಿದ್ದ ಜೋಕೊವಿಕ್ ಜತೆಗೆ ಅವರ ಪತ್ನಿ ತೆರಳಿರಲಿಲ್ಲ. ಅದಕ್ಕೆ ಮುನ್ನ ಕಳೆದ ವರ್ಷದ ವಿಂಬಲ್ಡನ್ ಫೈನಲ್ ಸಮಯದಲ್ಲೂ ಜೆಲೆನಾ ಕಾಣಿಸಿಕೊಂಡಿರಲಿಲ್ಲ. ಇದರಿಂದಾಗಿ ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಇದರಿಂದ ಬೇಸತ್ತಿರುವ ಜೋಕೊವಿಕ್ ಸ್ವತಃ ಈಗ ಸ್ಪಷ್ಟನೆ ನೀಡಿ, ಇದೆಲ್ಲ ವದಂತಿ ಎಂದಿದ್ದಾರೆ.

‘ನಾನು ಪತ್ರಿಕೆಗಳನ್ನು ಓದುವುದಿಲ್ಲ ಅಥವಾ ಮಾಧ್ಯಮಗಳ ಕಡೆ ಹೆಚ್ಚಿನ ಗಮನವನ್ನೂ ಹರಿಸುವುದಿಲ್ಲ. ಆದರೆ ಜನರು ನನ್ನ ಮತ್ತು ಜೆಲೆನಾರ ವಿಚ್ಛೇದನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದಂತಿದೆ. ಆದರೆ ಈ ಸುದ್ದಿಗಳು ನನ್ನ ಮತ್ತು ಜೆಲೆನಾರ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ’ ಎಂದು 17 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೊವಿಕ್ ಹೇಳಿದ್ದಾರೆ.

ಜೆಲೆನಾ ಜತೆಗೆ 2005ರಿಂದಲೂ ಡೇಟಿಂಗ್ ನಡೆಸುತ್ತಿದ್ದ ಜೋಕೊವಿಕ್, 2013ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ 2014ರ ಜುಲೈನಲ್ಲಿ ವಿವಾಹವಾಗಿದ್ದರು. ದಂಪತಿ 5 ವರ್ಷದ ಪುತ್ರ ಸ್ಟೆಾನ್ ಮತ್ತು 2 ವರ್ಷದ ಪುತ್ರಿ ಟಾರ ಅವರನ್ನು ಹೊಂದಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಹೆಚ್ಚಾಗಿ ಇಷ್ಟಪಡದ ಕಾರಣ ಜೋಕೊವಿಕ್ ಜತೆಗೆ ಹೆಚ್ಚಾಗಿ ಪ್ರಯಾಣಿಸುವುದಿಲ್ಲ ಎಂದೂ ಜೆಲೆನಾ ಇತ್ತೀಚೆಗೆ ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net