

ಲಂಡನ್: ನಿನ್ನೆ (ಮೇ.30) ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ 4ನೇ T20I ಪಂದ್ಯದಲ್ಲಿ ಪಾಕ್ ಪರ ವಿಕೆಟ್ ಕೀಪರ್ ಆಗಿ ಮೈದಾನಕ್ಕಿಳಿದಿದ್ದ ಆಜಂ ಖಾನ್, ವಿಲ್ ಜ್ಯಾಕ್ಸ್ ಕೊಟ್ಟ ಕೀಪರ್ ಕ್ಯಾಚ್ ಹಿಡಿಯುವಲ್ಲಿ ಮುಗ್ಗರಿಸಿದರು. ಇದು ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದ್ದು, ಹಿಗ್ಗಾಮುಗ್ಗಾ ಟ್ರೋಲ್ ಮಾಡಿ, ಟೀಕಿಸುವಂತೆ ಮಾಡಿದೆ.
ಪಾಕಿಸ್ತಾನ ತಂಡದಲ್ಲಿ ಕೀಪರ್-ಬ್ಯಾಟ್ಸ್ಮನ್ ಆಗಿರುವ ಆಜಂ ಖಾನ್, ನಿನ್ನೆಯ ಪಂದ್ಯದಲ್ಲಿ ಕ್ರೀಸ್ನಲ್ಲಿ ಇಂಗ್ಲೆಂಡ್ ಪರ ಆಕರ್ಷಕ ಬ್ಯಾಟಿಂಗ್ ಕೊಡುಗೆ ನೀಡಲು ನಿಂತಿದ್ದ ವಿಲ್ ಜ್ಯಾಕ್ಸ್ ವಿಕೆಟ್ ತೆಗೆಯಲು ಹ್ಯಾರಿಸ್ ರೌಫ್ ಹರಸಾಹಸ ಪಡುತ್ತಿದ್ದರು. ಈ ವೇಳೆ ಉತ್ತಮ ಬೌಲಿಂಗ್ ದಾಳಿ ಮಾಡಿದ ರೌಫ್, ಕೀಪಿಂಗ್ನಲ್ಲಿ ನಿಂತಿದ್ದ ಆಜಂಗೆ ಕ್ಯಾಚ್ ಹಿಡಿಯುವಂತೆ ಕಿರುಚಿದರು. ಆದ್ರೆ, ಕ್ಯಾಚ್ ಹಿಡಿಯುವಲ್ಲಿ ಖಾನ್ ವಿಫಲರಾಗಿದ್ದನ್ನು ಕಂಡು ರೌಫ್ ಮತ್ತು ತಂಡದ ಸಹ ಆಟಗಾರರು ಭಾರೀ ಅಸಮಾಧಾನ ಹೊರಹಾಕಿದರು.
ವಿಲ್ ಜಾಕ್ಸ್ ಅವರ ನೇರ ಕ್ಯಾಚ್ ಕೈಬಿಟ್ಟ ಆಜಂ ಖಾನ್ರನ್ನು ಟೀಕಿಸಿದ ಕ್ರಿಕೆಟ್ ಅಭಿಮಾನಿಗಳು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅವಮಾನ. ತಂಡಕ್ಕೆ ಭಾರೀ ಮುಖಭಂಗ ಉಂಟುಮಾಡಿದ ನೀನು, ಮೊದಲು ದಡೂತಿ ದೇಹವನ್ನು ಇಳಿಸುವತ್ತ ಹೆಚ್ಚು ಶ್ರಮಿಸು. ಕ್ರಿಕೆಟ್ ಅಥವಾ ಯಾವುದೇ ಕ್ರೀಡೆಯಾಗಲಿ ಉತ್ತಮ ಫಿಟ್ನೆಸ್ ಅತೀ ಮುಖ್ಯ. ಫಿಟ್ನೆಸ್ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಅಂತದ್ದರಲ್ಲಿ ನೀವ್ಯಾಕೆ ಹಿಂಗೆ? ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟೀಕಿಸಿದ್ದಾರೆ,(ಏಜೆನ್ಸೀಸ್).