

ವಾಷಿಂಗ್ಟನ್: ವೃತ್ತಿಪರ ಬಾಕ್ಸಿಂಗ್ ದಿಗ್ಗಜ ಮೊಹಮದ್ ಅಲಿ, 5ನೇ ವರ್ಷದ ಸ್ಮರಣಾರ್ಥ ಕಿರುಚಿತ್ರ ನಿರ್ಮಿಸಲಾಗಿದೆ. ಮೊಹಮದ್ ಅಲಿ 2016ರ ಜೂನ್ 3ರಂದು ನಿಧನರಾಗಿದ್ದರು. ನಿಧನರಾದ ಒಂದು ವಾರದ ಬಳಿಕ ಅಂತ್ಯಕ್ರಿಯೆ ಮಾಡಲಾಗಿತ್ತು. ಸಾರ್ವಕಾಲಿಕ ಶ್ರೇಷ್ಠ ಬಾಕ್ಸರ್ ಎನಿಸಿಕೊಂಡಿದ್ದ ಮೊಹಮದ್ ಅಲಿ ಹೆಸರನ್ನು ಮತ್ತಷ್ಟು ಚಿರಸ್ಥಾಯಿ ಮಾಡುವ ನಿಟ್ಟಿನಲ್ಲಿ ಸಿಟಿ ಆಫ್ ಅಲಿ ಹೆಸರಿನಲ್ಲಿ ಕಿರುಚಿತ್ರ ಹೊರತರಲಾಗಿದೆ. ಅಂದಾಜು 90 ನಿಮಿಷಗಳ ಈ ಕಿರುಚಿತ್ರದಲ್ಲಿ ಅಲಿ ಅವರ ತವರು, ಅವರ ಕಡೇ ದಿನಗಳ ಕುರಿತು ಚಿತ್ರಿಸಲಾಗಿದೆ. ಅವರ ಅಂತ್ಯಕ್ರಿಯೆ ವೇಳೆ ನೆರೆದಿದ್ದ ಜನಸಾಗರ, ಮೆರವಣಿಗೆಯುದ್ದಕ್ಕೂ ನೆರೆದಿದ್ದ ಜನಸ್ತೋಮ, ಅಭಿಮಾನಿಗಳು ಶವದ ಪೆಟ್ಟಿಗೆ ಮೇಲೆ ಹೂವಿನ ಮಳೆಯನ್ನೇ ಹರಿಸಿದ್ದರು.
ಅಲಿ ಅವರ ತವರು ಲೂಯಿಸ್ವಿಲ್ಲೆ ಹಾಗೂ ಅಲ್ಲಿನ ಜನರನ್ನು ನೋಡಬೇಕೆಂಬ ತುಡಿತ ಅವರನ್ನು ಸದಾ ಕಾಡುತ್ತಿತ್ತು. ಲೊಯಿಸ್ವಿಲ್ಲೆಯಲ್ಲೇ ಅವರ ವೃತ್ತಿಪರ ಬಾಕ್ಸಿಂಗ್ ಆರಂಭಗೊಂಡಿದ್ದು, ಹೀಗಾಗಿ ಈ ನೆಲದ ಮೇಲೆ ಅವರಿಗೆ ವಿಶೇಷ ಅಭಿಮಾನವಿತ್ತು ಎಂದು ಅಲಿ ಪುತ್ರಿ ರಶೀದಾ ಅಲಿ ತಿಳಿಸಿದ್ದಾರೆ. ಅದೇ ರೀತಿ ಲೊಯಿಸ್ವಿಲ್ಲೆಯ ಜನರು ಅಷ್ಟೇ ಪ್ರೀತಿ ತೋರುತ್ತಿದ್ದರು ಎಂದಿದ್ದಾರೆ.
ನನ್ನ ತಂದೆ ಯಾವಾಗಲೂ ಪ್ರೀತಿ, ವಿಶ್ವಾಸವನ್ನು ತುಂಬಾ ನಂಬುತ್ತಿದ್ದರು. ಹಾಗೆಯೇ ಜನಾಂಗೀಯ ನಿಂದನೆ ವಿರುದ್ಧ ಧ್ವನಿ ಎತ್ತಿದ್ದರು ಎಂದು ರಶೀದಾ ಹೇಳಿದ್ದಾರೆ. ಲೊಯಿಸ್ವಿಲ್ಲೆ ಜತೆಗೆ ಮೊಹಮದ್ ಅಲಿ ಭಾವನಾತ್ಮಕ ಸಂಬಂಧ ಹೊಂದಿದ್ದರು. ಅವರೊಬ್ಬ ನಿಜವಾದ ಮಾಸ್ಟರ್ ಎಂದು ಸ್ಥಳಿಯ ರಾಜಕಾರಣಿ ಚಾರ್ಲ್ಸ್ ಬೂಕರ್ ತಿಳಿಸಿದ್ದಾರೆ.