

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪ್ರಶಸ್ತಿ ಸುತ್ತಿನ ಹೋರಾಟ ಮತ್ತು ಆತಿಥೇಯರ ಎದುರಿನ ಟೆಸ್ಟ್ ಸರಣಿಗಾಗಿ ಭಾರತ ತಂಡ ಸುದೀರ್ವಾದ ಇಂಗ್ಲೆಂಡ್ ಪ್ರವಾಸಕೈಗೊಂಡಿದೆ. ಪ್ರವಾಸದ ಆರಂಭದಲ್ಲಿ ಭಾರತ ತಂಡ ಸೌಥಾಂಪ್ಟನ್ನಲ್ಲಿ ಕ್ವಾರಂಟೈನ್ಗೂ ಒಳಪಟ್ಟಿದೆ. ಫಿಟ್ನೆಸ್ ಗೊಂದಲದ ನಡುವೆಯೂ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಕೂಡ ಭಾರತ ತಂಡದ ಜತೆಗೆ ಪ್ರವಾಸಕ್ಕೆ ತೆರಳಿದ್ದಾರೆ. ಈ ನಡುವೆ ಬಿಸಿಸಿಐ, ಪ್ರವಾಸಕ್ಕೆ ಪತ್ನಿ-ಮಕ್ಕಳು, ಗೆಳತಿಯರನ್ನು ಕರೆದೊಯ್ಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಗೆಳತಿ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರೊಂದಿಗೆ ತೆರಳಿರುವರೇ ಎಂಬ ಅನುಮಾನ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ. ಇವರಿಬ್ಬರು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿರುವ ಚಿತ್ರಗಳಿಂದ ಇದಕ್ಕೆ ಕೆಲ ಪುರಾವೆಗಳೂ ಲಭಿಸಿವೆ.
ಪ್ರವಾಸಕ್ಕೆ ತೆರಳಿದ ದಿನದಿಂದಲೂ ಕೆಎಲ್ ರಾಹುಲ್ ಇನ್ಸ್ಟಾಗ್ರಾಂನಲ್ಲಿ ಕೆಲ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಈ ನಡುವೆ ಆಥಿಯಾ ಶೆಟ್ಟಿ ಕೂಡ ಕಳೆದ ಕೆಲ ದಿನಗಳಿಂದ ಪ್ರಕಟಿಸುತ್ತಿರುವ ಚಿತ್ರಗಳಿಂದ ಇವರಿಬ್ಬರೂ ಸೌಥಾಂಪ್ಟನ್ನಲ್ಲೇ ಕ್ವಾರಂಟೈನ್ನಲ್ಲಿರುವುದು ಬಹುತೇಕ ಪಕ್ಕಾ ಆಗಿದೆ. ಇಬ್ಬರೂ ಕಳೆದ ಕೆಲ ಸಮಯದಿಂದ ಡೇಟಿಂಗ್ನಲ್ಲಿರುವುದು ಈಗಾಗಲೆ ಬಹಿರಂಗಗೊಂಡಿತ್ತು.
ರಾಹುಲ್ ಕೆಲ ದಿನಗಳ ಹಿಂದೆ ವಿಮಾನದಿಂದ ಸೌಥಾಂಪ್ಟನ್ಗೆ ಬಂದಿಳಿದ ಚಿತ್ರವನ್ನು ಪ್ರಕಟಿಸಿದ್ದರು. ಅದೇ ಸಮಯಕ್ಕೆ ಅಥಿಯಾ ಶೆಟ್ಟಿ ಕೂಡ ಆಕಾಶದ ಚಿತ್ರವನ್ನು ಪ್ರಕಟಿಸಿದ್ದು, ಇಬ್ಬರ ಚಿತ್ರದಲ್ಲಿನ ವಾತಾವರಣ ಬಹುತೇಕ ಹೋಲಿಕೆಯಾಗಿದೆ. ಇಬ್ಬರೂ ಸೌಥಾಂಪ್ಟನ್ನಲ್ಲೇ ಇದ್ದೀರಾ ಎಂದು ಅನೇಕ ಅಭಿಮಾನಿಗಳು ಇನ್ಸ್ಟಾಗ್ರಾಂ ಕಾಮೆಂಟ್ನಲ್ಲಿ ಪ್ರಶ್ನೆಗಳನ್ನೂ ಎಸೆದಿದ್ದಾರೆ. ಇದಕ್ಕೆ ಉತ್ತರ ಬರದಿದ್ದರೂ, ಇನ್ನೂ ಕೆಲವು ಸುಳಿವುಗಳಿಂದ ಕ್ರಿಕೆಟ್ ಪ್ರೇಮಿಗಳು, ಅವರಿಬ್ಬರು ಕ್ವಾರಂಟೈನ್ನಲ್ಲಿ ಜತೆಯಲ್ಲಿರುವುದನ್ನು ಊಹಿಸಿದ್ದಾರೆ.
ಇನ್ನು ರಾಹುಲ್ ಹೂವಿನ ಗಿಡವೊಂದರ ಎದುರು ಪೋಸ್ ನೀಡಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.ಇದೇ ವೇಳೆ ಅದೇ ಹೂವಿನ ಗಿಡದ ಚಿತ್ರವನ್ನು ಅಥಿಯಾ ಶೆಟ್ಟಿ ಕೂಡ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಕೋಣೆಯೊಂದರ ಬೆಡ್ ಮೇಲೆ ಕುಳಿತುಕೊಂಡಿರುವ ಚಿತ್ರವೊಂದನ್ನು ಪ್ರಕಟಿಸಿದ್ದ ಅಥಿಯಾ ಶೆಟ್ಟಿ, ಈ ವೇಳೆ ಜೀನ್ಸ್ ಜಾಕೆಟ್ ಒಂದನ್ನು ಧರಿಸಿದ್ದರು. ಅಂಥದ್ದೇ ಜಾಕೆಟ್ ಹಾಕಿಕೊಂಡು ಕೆಎಲ್ ರಾಹುಲ್ ಕೂಡ ಪೋಸ್ ನೀಡಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಹೀಗಾಗಿ ಅದು ರಾಹುಲ್ನದ್ದೇ ಜಾಕೆಟ್ ಎಂಬುದು ಖಚಿತಗೊಂಡಿದೆ. ರಾಹುಲ್ ಸೌಥಾಂಪ್ಟನ್ ಕ್ರೀಡಾಂಗಣದ ಆವರಣದಲ್ಲಿ ಕ್ವಾರಂಟೈನ್ ಆಗಿರುವುದರಿಂದ ಗಾರ್ಡನ್ನಲ್ಲಿ ಕುಳಿತ ಚಹಾ ಸೇವಿಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ. ಅಥಿಯಾ ಶೆಟ್ಟಿ ಪೋಸ್ಟ್ ಮಾಡಿರುವ ಕಪ್ಪುಬಿಳುಪು ಚಿತ್ರದಲ್ಲೂ ಹಿನ್ನೆಲೆಯಲ್ಲಿ ಅದೇ ಗಾರ್ಡನ್ ಮತ್ತು ಅದರ ಬೇಲಿ ಕಾಣಿಸಿದೆ. ಮಂಗಳೂರು ಮೂಲದ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಕೆಲವು ಬಾಲಿವುಡ್ ಸಿನಿಮಾಗಳಲ್ಲೂ ಈಗಾಗಲೆ ನಟಿಸಿದ್ದಾರೆ.