

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಖ್ಯಾತ ವೀಕ್ಷಕ ವಿವರಣೆಕಾರ ಸಂಜಯ್ ಮಂಜ್ರೇಕರ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ವಾಕ್ಸಮರ ಕ್ರಿಕೆಟ್ ಪ್ರೇಮಿಗಳಿಗೆ ಪುಕ್ಕಟೆ ಮನರಂಜನೆ ನೀಡುತ್ತಿದೆ. ಆರ್. ಅಶ್ವಿನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಗೆ ಸೇರಿಸಲಾರೆ ಎಂದು ಸಂಜಯ್ ಮಂಜ್ರೇಕರ್ ಇತ್ತೀಚೆಗೆ ಹೇಳಿಕೆ ನೀಡಿದ ಬಳಿಕ ಈ ವಾರ್ ಶುರುವಾಗಿದ್ದು, ತಮಿಳು ಸಿನಿಮಾದ ಡೈಲಾಗ್ಗಳ ಮೀಮ್ಸ್ ಬಳಕೆಯೊಂದಿಗೆ ಇವರಿಬ್ಬರ ನಡುವೆ ವಾಗ್ಯುದ್ಧ ಮುಂದುವರಿದಿದೆ.
ಅಶ್ವಿನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಎಂದು ಜನರು ಕರೆಯುವಾಗ ನನಗೆ ಸಮಸ್ಯೆ ಎದುರಾಗುತ್ತದೆ. ಅಶ್ವಿನ್ ಬೌಲಿಂಗ್ನ ಒಂದು ಪ್ರಮುಖ ಸಮಸ್ಯೆ ಎಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಅಸ್ಟ್ರೆಲಿಯಾದಲ್ಲಿ ಅವರು ಒಮ್ಮೆಯೂ 5 ವಿಕೆಟ್ ಗೊಂಚಲು ಪಡೆದಿಲ್ಲ. ಇನ್ನು ಕಳೆದ 4 ವರ್ಷಗಳಲ್ಲಿ ಭಾರತೀಯ ಪಿಚ್ಗಳಲ್ಲಿ ಅವರ ನಿರ್ವಹಣೆ ನೋಡಿದರೆ, ರವೀಂದ್ರ ಜಡೇಜಾ ಕೂಡ ಅವರ ಸಾಮರ್ಥ್ಯಕ್ಕೆ ಸರಿಸಮಾನ ನಿರ್ವಹಣೆ ತೋರಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ತವರಿನ ಸರಣಿಯಲ್ಲಿ ಅರ್ ಪಟೇಲ್ ಅಂಥದ್ದೇ ಪಿಚ್ನಲ್ಲಿ ಅಶ್ವಿನ್ಗಿಂತ ಹೆಚ್ಚು ವಿಕೆಟ್ ಕಬಳಿಸಿದ್ದರು ಎಂದು ಸಂಜಯ್ ಮಂಜ್ರೇಕರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಅಶ್ವಿನ್ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಆಗ ಟ್ವಿಟರ್ನಲ್ಲೂ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಜಯ್ ಮಂಜ್ರೇಕರ್, ಸಾರ್ವಕಾಲಿಕ ಶ್ರೇಷ್ಠ ಎನ್ನುವುದು ಕ್ರಿಕೆಟಿಗನೊಬ್ಬನಿಗೆ ನೀಡಲಾಗುವ ಅತ್ಯುನ್ನತ ಪ್ರಶಂಸೆ. ಡಾನ್ ಬ್ರಾಡ್ಮನ್, ಸೋಬರ್ಸ್, ಗಾವಸ್ಕರ್, ತೆಂಡುಲ್ಕರ್, ವಿರಾಟ್ ಕೊಹ್ಲಿ ಮುಂತಾದವರು ನನ್ನ ಪುಸ್ತಕದಲ್ಲಿ ಸಾರ್ವಕಾಲಿಕ ಶ್ರೇಷ್ಠರು. ಅಪಾರ ಗೌರವದೊಂದಿಗೆ ನಾನು ಹೇಳುವುದೇನೆಂದರೆ, ಅಶ್ವಿನ್ ಇನ್ನೂ ಸಾರ್ವಕಾಲಿಕ ಶ್ರೇಷ್ಠರೆನಿಸುವ ಎತ್ತರಕ್ಕೆ ಏರಿಲ್ಲ ಎಂದು ಟ್ವೀಟಿಸಿದ್ದರು.
ಮಂಜ್ರೇಕರ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಅಶ್ವಿನ್, ತಮಿಳು ಸಿನಿಮಾ ಅನ್ನಿಯನ್ನ ಮೀಮ್ಸ್ ಅನ್ನು ಟ್ವೀಟಿಸಿದ್ದರು. ದಯವಿಟ್ಟು ಹಾಗೆ ಹೇಳಬೇಡ, ಹೃದಯಕ್ಕೆ ನೋವಾಗುತ್ತದೆ ಎಂದು ಸಿನಿಮಾದಲ್ಲಿ ನಾಯಕನಟ ವಿಕ್ರಮ್, ಸಹನಟ ವಿವೇಕ್ಗೆ ಹೇಳುವ ತಮಿಳು ಡೈಲಾಗ್ ಅನ್ನು ಅದರಲ್ಲಿತ್ತು. ಟ್ವಿಟರ್ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಮಂಜ್ರೇಕರ್, ಇತ್ತೀಚೆಗಿನ ದಿನಗಳಲ್ಲಿ ನೇರಮಾತಿನ ಕ್ರಿಕೆಟ್ ವಿಶ್ಲೇಷಣೆಗಳಿಗೆ ಗಲಾಟೆ ಶುರುವಾದಾಗ ನನ್ನ ಹೃದಯಕ್ಕೂ ನೋವಾಗುತ್ತದೆ ಎಂದು ಟ್ವೀಟಿಸಿದ್ದಾರೆ. ಈ ವಾಗ್ವಾದ ಮುಂದೆಯೂ ಮುಂದುವರಿಯಲಿದೆಯೇ ಎಂಬುದನ್ನು ಕ್ರಿಕೆಟ್ ಪ್ರೇಮಿಗಳು ಕಾದು ನೋಡಬೇಕಾಗಿದೆ.