ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್​ ವಿತರಣೆ, ಆದರೆ ಬಳಸುವಂತಿಲ್ಲ!

oly web1
Published on

ಟೋಕಿಯೊ: ಕರೊನಾ ವೈರಸ್​ ಹಾವಳಿಯ ನಡುವೆಯೂ ಜುಲೈ 23ರಿಂದ ಟೋಕಿಯೊ ಒಲಿಂಪಿಕ್ಸ್​ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸಲು ಆತಿಥೇಯ ಜಪಾನ್​ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕ್ರೀಡಾಕೂಟದಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರೆಲ್ಲರಿಗೂ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್​ಗಳನ್ನು ಸಂಘಟಕರು ವಿತರಿಸಲಿದ್ದಾರೆ. ಜತೆಗೆ ಈ ಕಾಂಡೋಮ್​ಗಳನ್ನು ಬಳಸದಿರಲು ಸಾಧ್ಯವಾದಷ್ಟು ಪ್ರಯತ್ನಿಸಿರಿ ಎಂಬ ಸಲಹೆಯನ್ನೂ ಆತಿಥೇಯರು ನೀಡಿದ್ದಾರೆ. ಯಾಕೆ ಗೊತ್ತೇ?

ಕರೊನಾ ವೈರಸ್​ ಕಾಲದಲ್ಲಿ ನಡೆಯುತ್ತಿರುವ ಈ ಮಹಾ ಕ್ರೀಡಾಕೂಟದ ವೇಳೆ ಕೆಲವು ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ಹೀಗಾಗಿ ಕಾಂಡೋಮ್​ಗಳನ್ನು ವಿತರಿಸಿದರೂ ಅದನ್ನು ಬಳಸದಿರುವಂತೆ ಸಂಘಟಕರು ಸೂಚಿಸಲಿದ್ದಾರೆ. ಅಂದರೆ ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳು ಸೆಕ್ಸ್​ನಲ್ಲಿ ಪಾಲ್ಗೊಳ್ಳಬಾರದು ಎಂದು ಪರೋಕ್ಷವಾಗಿ ಸೂಚಿಸಿದೆ. ಇದಕ್ಕೆ ಬದಲಾಗಿ ಈ ಕಾಂಡೋಮ್​ಗಳನ್ನು ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದೂ ಜಪಾನ್​ ಸಂಘಟಕರು ಸಲಹೆ ನೀಡಿದ್ದಾರೆ.

1988ರ ಸಿಯೋಲ್​ ಒಲಿಂಪಿಕ್ಸ್​ನಿಂದ ಏಡ್ಸ್​ ರೋಗದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ (ಐಒಸಿ) ಪ್ರತಿ ಒಲಿಂಪಿಕ್ಸ್​ ವೇಳೆ ತಾನೇ ಕಾಂಡೋಮ್​ಗಳನ್ನು ಉಚಿತವಾಗಿ ವಿತರಿಸುತ್ತ ಬಂದಿದೆ. ಅದರಂತೆ ಈ ಬಾರಿ ಕಾಂಡೋಮ್​ಗಳನ್ನು ವಿತರಿಸಿದರೂ, ಕ್ರೀಡಾಪಟುಗಳು ಅದನ್ನು ಒಲಿಂಪಿಕ್ಸ್​ ಗ್ರಾಮದಲ್ಲಿ ಬಳಸಬಾರದು. ಬದಲಾಗಿ ತಮ್ಮ ದೇಶಕ್ಕೆ ಅದನ್ನು ತೆಗೆದುಕೊಂಡು ಹೋಗಿ ಜಾಗೃತಿ ಮೂಡಿಸಲು ನೆರವಾಗಬೇಕು ಎಂದು ಐಒಸಿ ಹೇಳಿದೆ.

ಈ ವರ್ಷ ಐಒಸಿ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಪ್ರತಿಯೊಬ್ಬರ ನಡುವೆ 2 ಮೀಟರ್​ಗಳ ಅಂತರವಿರಬೇಕೆಂದು ಸೂಚಿಸಲಾಗಿದೆ. ಒಲಿಂಪಿಕ್​ ಗ್ರಾಮದಲ್ಲೂ ಕ್ರೀಡಾಪಟುಗಳ ನಡುವೆ ದೈಹಿಕ ಸ್ಪರ್ಶ ಇರಬಾರದು. ಕನಿಷ್ಠ ಹ್ಯಾಂಡ್​ ಶೇಕ್​ ಮತ್ತು ಅಪ್ಪುಗೆಯನ್ನೂ ಮಾಡಬಾರದು ಎಂದು ಹೇಳಿರುವ ಐಒಸಿ, ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ದಂಡವನ್ನೂ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net