

ನವದೆಹಲಿ: ಆರ್ಥಿಕ ಸಂಕಷ್ಟ, ಉಗ್ರವಾದ ಸೇರಿದಂತೆ ಒಂದಿಲ್ಲೊಂದು ಕಾರಣಕ್ಕೆ ವಿಶ್ವದ ಮುಂದೆ ಬೆತ್ತಲಾಗಿರುವ ಪಾಕಿಸ್ತಾನವು ಸದಾ ಸುದ್ದಿಯಲ್ಲಿರುತ್ತದೆ. ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತ ಟೀಕೆಗೆ ಗುರಿಯಾಗುವ ಪಾಕಿಸ್ತಾನ ದೇಶವು ಆರ್ಥಿಕ ಸಂಕಷ್ಟದ ನಡುವೆಯೂ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಪಿಗೆ ಆತಿಥ್ಯ ವಹಿಸಲಿದೆ. ಇದರ ನಡುವೆಯೇ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಶೋಯೆಬ್ ಮಲಿಕ್ ತಾನು ತನ್ನ ರಾಷ್ಟ್ರವನ್ನು ಪ್ರತಿನಿಧಿಸುವುದರಲ್ಲಿ ಯಾವುದೇ ಆಸಕ್ತಿಯನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.
ಭಾರತದ ಟೆನ್ನಿಸ್ ಆಟಗಾರ್ತಿ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಪಾಕಿಸ್ತಾನವನ್ನು ಟೀಕಿಸಿ ಕಮೆಂಟ್ ಹಾಕುತ್ತಿದ್ದಾರೆ. ಇದಲ್ಲದೆ ಭಾರತ ಪಾಕ್ಗೆ ಬರುವ ಕುರಿತು ಶೋಯೆಬ್ ಮಾತನಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಶೋಯೆಬ್, ಪಾಕಿಸ್ತಾನ ಕ್ರಿಕೆಟ್ ತಂಡಕ್ಕಾಗಿ ನಾನು ಇಷ್ಟು ವರ್ಷಗಳ ಕಾಲ ಆಡಿರುವುದು ನನಗೆ ಖುಷಿ ನೀಡಿದೆ. ಆದರೆ, ಇನ್ಮುಂದೆ ನನಗೆ ಪಾಕಿಸ್ತಾನದ ಪರವಾಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ನಾನು ಮುಂದಿನ ದಿನಗಳಲ್ಲಿ ಟಿ20 ಲೀಗ್ಗಳಲ್ಲಿ ಹೆಚ್ಚು ಆಡುತ್ತೇನೆ. ಲಭ್ಯವಿರುವ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತೇನೆ. ಆದರೆ, ಇನ್ನು ಮುಂದೆ ಪಾಕಿಸ್ತಾನಕ್ಕಾಗಿ ಆಡುವ ಆಸೆ ನನಗಿಲ್ಲ ಎಂದು ಹೇಳಿದ್ದಾರೆ.
ಭಾರತ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳುವ ಕುರಿತು ಪ್ರತಿಕ್ರಿಯಿಸಿದ ಶೋಯೆಬ್, ಎರಡು ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಬೇರೆ ವಿಷಯವಾಗಿದ್ದು, ಅಗತ್ಯವಿರುವ ರೀತಿಯಲ್ಲಿ ಅದನ್ನು ಪರಿಹರಿಸಬೇಕಿದೆ. ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸಬಾರದು. ಏಕದಿನ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ತಂಡವು ಭಾರತಕ್ಕೆ ಹೋದ ರೀತಿ ಅವರು ಕೂಡ ಇಲ್ಲಿಗೆ ಬಂದು ಆಡಬೇಕು. ಭಾರತ ತಂಡದಲ್ಲಿರುವ ಈಗಿರುವ ಆಟಗಾರರು ಪಾಕಿಸ್ತಾನದ ನೆಲದಲ್ಲಿ ಆಡಿಲ್ಲ. ಇದು ಅವರಿಗೆ ಉತ್ತಮ ಅವಕಾಶವಾಗಿದ್ದು, ಭಾರತ ತಂಡವು ಪಾಕಿಸ್ತಾನಕ್ಕೆ ಬರಬೇಕು ಎಂದು ಶೋಯೆಬ್ ಮಲಿಕ್ ಹೇಳಿದ್ದಾರೆ.