

ವಾರಣಾಸಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಕೆಲಸಗಳಿಂದಲೇ ಸುದ್ದಿಯಲ್ಲಿರುವ ಖ್ಯಾತ ಯೂಟ್ಯೂಬರ್, ಬಿಗ್ಬಾಸ್ ಒಟಿಟಿ-2 ವಿನ್ನರ್ ಎಲ್ವಿಶ್ ಯಾದವ್ ವಿವಾದದ ಕೇಂದ್ರಬಿಂದು ಎಂದರೆ ತಪ್ಪಾಗಲಾರದು. ಇದೀಗ ಪುರಾಣ ಪ್ರಸಿದ್ಧ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಫೋಟೋ ತೆಗೆದಿರುವ ಆರೋಪ ಕೇಳಿ ಬಂದಿದ್ದು, ಎಲ್ವಿಶ್ ಯಾದವ್ ವಿರುದ್ಧ ದೂರು ದಾಖಲಾಗಿದೆ.
ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಒಂದು ವೇಳೆ ಮೊಬೈಲ್ ಬಳಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಇದೀಗ ಎಲ್ವಿಶ್ ದೇವಾಲಯದ ಒಳಗೆ ಫೋಟೋ ತೆಗೆಸಿಕೊಂಡಿರುವುದು ಹೊಸ ವಿವಾದವನ್ನು ಹುಟ್ಟು ಹಾಕಿದ್ದು, ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಲಾಗಿದೆ.
ವಾರಣಾಸಿ ಮೂಲದ ವಕೀಲರಾದ ಪ್ರತೀಕ್ ಕುಮಾರ್ ಸಿಂಗ್ ಎಂಬುವವರು ಎಲ್ವಿಶ್ ಯಾದವ್ ವಿರುದ್ಧ ದೂರು ದಾಖಲಿಸಿದ್ದು, ದೇವಾಲಯದ ಆವರಣದಲ್ಲಿ ಮೊಬೈಲ್ ಹಾಗೂ ಕ್ಯಾಮರಾ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಇದರ ಹೊರತಾಗಿಯೂ ಎಲ್ವಿಶ್ ಫೋಟೋ ತೆಗೆಸಿಕೊಂಡಿರುವುದು ನಿಯಮಗಳಿಗೆ ವಿರುದ್ಧವಾಗಿದ್ದು, ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ವಕೀಲ ಪ್ರತೀಕ್ ಕುಮಾರ್ ಸಿಂಗ್ ದೂರು ದಾಖಲಿಸಿದ್ದಾರೆ.
ಕೆಲ ತಿಂಗಳ ಹಿಂದೆ ನೋಯ್ಡಾದಲ್ಲಿ ನಡೆದ ರೇವ್ಪಾರ್ಟಿಗೆ ಹಾವಿನ ವಿಷ ಸರಬರಾಜು ಮಾಡಿದ ಆರೋಪದ ಮೇಲೆ ಪೊಲೀಸರು ಎಲ್ವಿಶ್ ಯಾದವ್ನನ್ನು ವಶಕ್ಕೆ ಪಡೆದಿದ್ದರು. ಇದಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಲ್ವಿಶ್ ಯಾದವ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು.