ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಕುಖ್ಯಾತ ಅಂತಾರಾಜ್ಯ ಕಳ್ಳ ಫರ್ಹಾನ್ ಅಹ್ಮದ್ ಗ್ಯಾಂಗ್ಅನ್ನು ಹಿಡಿಯುವಾಗ ಆತನ ಮೇಲೆ ಪೊಲೀಸರು ಫೈರ್ ಮಾಡಿದ್ದಾರೆ.
ಮುಂಬೈ ಮೂಲದ ಫರ್ಹಾನ್ ಶೇಖ್ ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣ ದಾಖಲಾಗಿದೆ. ಅಲ್ಲದೇ ಹೈದರಾಬಾದ್, ಕಲಬುರಗಿ, ಅಹ್ಮದ್ ನಗರ, ಸೂರತ್ ಮತ್ತು ಮುಂಬೈನಲ್ಲಿ ರಾಬರಿ ಹಾಗೂ ಕೊಲೆ ಯತ್ನ ಪ್ರಕರಣಗಳು ಈತನ ಮೇಲಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ವಿಜಯಲಕ್ಷ್ಮೀ ದರ್ಶನ್; ಪತಿಗಾಗಿ ನವ ಚಂಡಿಕಾಯಾಗ ಮಾಡಿಸಿದ ಪತ್ನಿ
ಅದರಂತೆ ಕೇಶ್ವಾಪುರ ಪೊಲೀಸರು ಜುವೆಲರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದು, ಶುಕ್ರವಾರ ಈತನ ಇತರ ಸಹಚರರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಹುಬ್ಬಳ್ಳಿಯ ಹೊರವಲಯದ ಗಾಮನಗಟ್ಟಿ ರಸ್ತೆ ಬಳಿಯ ತಾರಿಹಾಳ ಕ್ರಾಸ್ ಬಳಿಯಲ್ಲಿ ಆರೋಪಿ ಫರ್ಹಾನ್ ಶೇಖ್ ಪೊಲೀಸರ ಮೇಲೆಯೇ ಹಲ್ಲೇ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು ತಮ್ಮ ಆತ್ಮ ರಕ್ಷಣೆಗೆ ಮುಂದಾಗಿದ್ದು, ಕೇಶ್ವಾಪುರ ಪೊಲೀಸ್ ಠಾಣೆ ಪಿಎಸ್ ಐ ಕವಿತಾ ಮಾಡಗ್ಯಾಳ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು, ನಂತರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಫರ್ಹಾನ್ ಕಾಲಿಗೆ ಗುಂಡು ತಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.