

ಚೆನ್ನೈ: ತಮ್ಮ ಅಭಿನಯ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕಚವೇ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಅಮಲಾ ಪೌಲ್ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಗರ್ಭವತಿಯಾಗಿದ್ದ ವೇಳೆ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ಅಮಲಾ ಇತ್ತೀಚಿಗೆ ನಡೆದ ಕಾಲೇಜು ಕಾರ್ಯಕ್ರಮ ಒಂದರಲ್ಲಿ ತುಂಡುಡುಗೆ ಧರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ನಟಿಯಾದವಳು ಎಲ್ಲಿಗೆ ಯಾವ ಡ್ರೆಸ್ ಧರಿಸಿ ಬರಬೇಕೆಂಬ ಕನಿಷ್ಠ ಜ್ಞಾನ ಇಲ್ಲವೇ ಎಂಬ ಆಕ್ರೋಶದ ಮಾತುಗಳು ವ್ಯಕ್ತವಾಗಿತ್ತು.
ಇದೀಗ ಈ ಕುರಿತು ಮಾತನಾಡಿರುವ ನಟಿ ಅಮಲಾ ಪೌಲ್, ಟೀಕೆ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ತಮ್ಮ ಅಭಿನಯದ ಲೆವೆಲ್ ಕ್ರಾಸ್ ಚಿತ್ರದ ಪ್ರಮೋಷನ್ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ನನ್ನ ಡ್ರೆಸ್ಸಿಂಗ್ ಸ್ಟೈಲ್ನ ಹೇಗೆ ತೋರಿಸುತ್ತಾರೆ ಎಂಬುದರಲ್ಲೇ ಸಮಸ್ಯೆ ಇದೆ. ಸಮಸ್ಯೆ ಇರೋದು ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ನನಗೆ ಖುಷಿ ನೀಡೋದನ್ನು ನಾನು ಧರಿಸುತ್ತೇನೆ. ಫಂಕ್ಷನ್ಗಳಿಗೆ ನಾನು ಧರಿಸೋ ಡ್ರೆಸ್ ಅಸಹಜವಾಗಿ ಇರುವುದಿಲ್ಲ. ಅವರು ನನ್ನನ್ನು ಹೇಗೆ ಬಿಂಬಿಸುತ್ತಾರೆ ಎಂಬುದರಲ್ಲಿ ಸಮಸ್ಯೆ ಇದೆ. ಅದನ್ನು ನಿಯಂತ್ರಿಸುವುದು ನನ್ನ ಕೈಯಲ್ಲಿ ಇಲ್ಲ. ನಾನು ಎಲ್ಲ ರೀತಿಯ ಡ್ರೆಸ್ನ ಹಾಕುತ್ತೇನೆ. ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಉಡುಗೆಯನ್ನೂ ಧರಿಸುತ್ತೇನೆ ಎಂದು ನಟಿ ಅಮಲಾ ಪೌಲ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಮಲಾ, ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಅಮಲಾ ಒಂದು ರೀತಿಯಲ್ಲಿ ತೆರೆದ ಪುಸ್ತಕವಿದ್ದಂತೆ. ಅವರ ಬಗ್ಗೆ ಬಹುತೇಕ ಸಂಗತಿಗಳು ಎಲ್ಲರಿಗೂ ತಿಳಿದಿದೆ. 2014ರಲ್ಲಿ ಅಮಲಾ, ತಮಿಳು ನಿರ್ದೇಶಕ ಎ.ಎಲ್. ವಿಜಯ್ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕುಂಟಾಗಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ವಿಜಯ್ ಅವರಿಂದ ವಿಚ್ಛೇದನ ಪಡೆದ ಬಳಿಕ ಅಮಲಾ ಮತ್ತೆ ಸಿನಿಮಾಗಳಲ್ಲಿ ಬಿಜಿಯಾದರು. ಇದರ ನಡುವೆ ತಮ್ಮ ಬಾಯ್ಫ್ರೆಂಡ್ ಜಗತ್ ದೇಸಾಯಿ ಅವರನ್ನು ಪರಿಚಯಿಸುವ ಮೂಲಕ ತಾವು ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದನ್ನು ಬಹಿರಂಗಪಡಿಸಿದರು. ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಜಗತ್ ದೇಸಾಯಿ ಜತೆ ಕಳೆದ ವರ್ಷ ನವೆಂಬರ್ 5ರಂದು ಅಮಲಾ ಹಸೆಮಣೆ ಏರಿದರು.
ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ಅಮಲಾ ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಅಮಲಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಮಲಾ ಅವರಿಗೆ ಜೂನ್ 11 ರಂದು ಹೆರಿಗೆಯಾಯಿತು. ವಿಶೇಷ ವಿಡಿಯೋ ಮೂಲಕ ಗಂಡು ಮಗು ಆಗಿರುವುದನ್ನು ಬಹಿರಂಗಪಡಿಸಿದರು. ಪತಿ ಜಗತ್ ದೇಸಾಯಿ ತಾಯಿ ಮತ್ತು ಮಗುವಿಗೆ ಅದ್ಧೂರಿ ಸ್ವಾಗತ ಕೋರಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದರು. ಅಮಲಾ ಪೌಲ್ ದಂಪತಿ ತಮ್ಮ ಮಗುವಿಗೆ ILAI (ಇಳೈ) ಎಂದು ಹೆಸರಿಟ್ಟಿದ್ದಾರೆ.