ಮಕ್ಕಳು ಹೀಗೆ ಮಾಡೋದು ನನಗೆ ಇಷ್ಟವಿಲ್ಲ: ಜಸ್ಪ್ರಿತ್​ ಬುಮ್ರಾ

ವಿಜಯವಾಣಿ - 2024-09-21T104129.397
Published on

ತಮಿಳುನಾಡು: ಗುರುವಾರ (ಸೆ.19) ಚೆನ್ನೈನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ಗಳು ಆರಂಭಿಕ ಹಂತದಲ್ಲೇ ಅಬ್ಬರಿಸುವಲ್ಲಿ ಮುಗ್ಗರಿಸಿದ್ದು, ನಾಲ್ಕು ಮುಖ್ಯ ವಿಕೆಟ್​ಗಳನ್ನು ಬಾಂಗ್ಲಾ ಬೌಲರ್​ಗಳಿಗೆ ಒಪ್ಪಿಸಿ ಪೆವಿಲಿಯನ್​ನತ್ತ ಮುಖಮಾಡಿದರು. ಶುರುವಿನಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭಮನ್ ಗಿಲ್, ರಿಷಬ್ ಪಂತ್, ಕೆ.ಎಲ್. ರಾಹುಲ್​ ವಿಕೆಟ್​ಗಳನ್ನು ಕಳೆದುಕೊಂಡ ಭಾರತ ಉತ್ತಮ ರನ್​ ಕಲೆಹಾಕಲು ಹೆಣಗಾಡಿತು. ಈ ಸಂಕಷ್ಟ ಸಮಯದಲ್ಲಿ ತಂಡಕ್ಕೆ ಆಸರೆಯಾಗಿದ್ದು, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಸ್ಫೋಟಕ ಬ್ಯಾಟಿಂಗ್.

ಮೊದಲ ಇನ್ನಿಂಗ್ಸ್​ ಹಂತ್ಯಕ್ಕೆ ಅಜೇಯ 89 ರನ್​ ಗಳಿಸಿದ ಜಡೇಜಾ ಒಂದೆಡೆಯಾದರೆ, ನಾಟ್​ ಔಟ್ ಆಗದೆ 102 ರನ್​ ಸಿಡಿಸಿದ ಅಶ್ವಿನ್ ಮತ್ತೊಂದೆಡೆ. ಈ ಮಧ್ಯೆ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಡುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ ಸ್ಟಾರ್​ ಬೌಲರ್​ ಬುಮ್ರಾ, ತಮ್ಮ ವಿರುದ್ಧ ಅಬ್ಬರಿಸಲು ಬಂದ ಬಾಂಗ್ಲಾ ಬ್ಯಾಟರ್​ಗಳಿಗೆ ರನ್​ ಗಳಿಸದಂತೆ ಕಟ್ಟಾಕಿದರು.

ಬುಮ್ರಾ ಬೌಲಿಂಗ್​ ಕಂಡು ಬೆದರಿದ ಬಾಂಗ್ಲಾದೇಶ ಬ್ಯಾಟ್ಸ್​ಮನ್​​ಗಳು ರನ್​ ಕಲೆಹಾಕಲು ತೀವ್ರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯಿತು. 149ಕ್ಕೆ ಆಲ್​​ಔಟ್​ ಆದ ಬಾಂಗ್ಲಾ ಹುಲಿಗಳು, ಬುಮ್ರಾ ಬೌಲಿಂಗ್​ಗೆ ತತ್ತರಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ವಿಕೆಟ್​ಗಳನ್ನು ಪಡೆದ ಭಾರತದ 6ನೇ ವೇಗಿ ಎಂಬ ಹೆಗ್ಗಳಿಕೆಗೆ ಜಸ್ಪ್ರಿತ್ ಪಾತ್ರರಾಗಿದ್ದಾರೆ. ಕ್ರಿಕೆಟ್​ ಲೋಕದಲ್ಲಿ ತಮ್ಮ ಬೌಲಿಂಗ್ ದಾಳಿಯಿಂದಲೇ ದಾಖಲೆ ಬರೆಯುತ್ತಿರುವ ಬುಮ್ರಾಗೆ ಅಪಾರ ಮೆಚ್ಚುಗೆಗಳು ಹರಿದುಬಂದಿವೆ.

ಇನ್ನು ನಿಮ್ಮ ಬೌಲಿಂಗ್ ಯಾಕಷ್ಟು ಡೇಂಜರ್​? ಎಂಬ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಜಸ್ಪ್ರಿತ್​, “ಈ ವಿಷಯದಲ್ಲಿ ನನಗೆ ಏನು ಹೇಳಬೇಕೆಂದು ಗೊತ್ತಿಲ್ಲ. ನಾನು ಬಾಲ್ಯದಲ್ಲಿಯೇ ಕ್ರಿಕೆಟ್​ ವೀಕ್ಷಿಸಲು ಪ್ರಾರಂಭಿಸಿದೆ. ಅದರಲ್ಲಿ ವೇಗದ ಬೌಲಿಂಗ್‌ ಬಹಳ ಇಷ್ಟವಾಯ್ತು. ನಾನ್ಯಾಕೆ ಅದನ್ನೇ ಫಾಲೋ ಮಾಡಬಾರದು ಎಂದು ತರಬೇತಿ ಪಡೆಯಲು ಶುರುಮಾಡಿದೆ. ಟಿವಿ ನೋಡುತ್ತಲೇ ಬೌಲಿಂಗ್ ಮಾಡೋದನ್ನು ಕಲಿತಿದ್ದೇನೆ. ಮಕ್ಕಳು ನನ್ನ ಬೌಲಿಂಗ್ ಆ್ಯಕ್ಷನ್​ ನೋಡಿ ಅದನ್ನೇ ಅನುಕರಣೆ ಮಾಡುವುದು ಬೇಡ. ಅದನ್ನು ನಾನು ಬಯಸುವುದಿಲ್ಲ. ಆದರೆ, ನನ್ನಿಂದ ಏನು ಮಾಡಲು ಸಾಧ್ಯವಾಗ್ತಿಲ್ಲ. ಒಂದೆಡೆ ಮಕ್ಕಳ ಮೇಲೆ ನನ್ನ ಬೌಲಿಂಗ್​ ಪ್ರಭಾವ ಬೀರಿದೆ ಎಂಬುದು ಸಂತೋಷವಿದೆ" ಎಂದು ಬುಮ್ರಾ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net