ಒಂದು ಬಾರಿಯೂ ಕಪ್​ ಎತ್ತದ್ದಿದ್ರು RCB ಐಪಿಎಲ್​ನ ಬೆಸ್ಟ್ ಫ್ರಾಂಚೈಸಿ! ಈ 3 ವಿಷಯಗಳೇ ಅದಕ್ಕೆ ಕಾರಣ

ವಿಜಯವಾಣಿ - 2024-09-20T125324.607
Published on

ನವದೆಹಲಿ: ಐಪಿಎಲ್ 2024ರ ಆವೃತ್ತಿಯ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕೊಟ್ಟು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ದ್ವಿತೀಯಾರ್ಧದಲ್ಲಿ ಯಾರೂ ಊಹಿಸಲಾರದ ಪ್ರದರ್ಶನ ನೀಡಿ, ಸತತ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇಆಫ್​ಗೆ ರೋಚಕವಾಗಿ ಎಂಟ್ರಿ ಕೊಟ್ಟಿತು. ಇದು ಐಪಿಎಲ್ ಇತಿಹಾಸದಲ್ಲೇ ನೆನಪಿಟ್ಟುಕೊಳ್ಳುವಂತ ಶಾಕಿಂಗ್ ಕಮ್​ಬ್ಯಾಕ್ ಎಂದರೆ ತಪ್ಪಾಗಲಾರದು. 16 ವರ್ಷಗಳಿಂದ ಒಂದೇ ಒಂದು ಬಾರಿಯೂ ಕಪ್ ನೋಡದ ಫ್ರಾಂಚೈಸಿ 17ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಭರವಸೆ ನೀಡಿತ್ತು. ಆದ್ರೆ, ಅಂತಿಮವಾಗಿ ಆರ್​ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್ ಪಡೆ 4 ವಿಕೆಟ್ ಅಂತರದಿಂದ ಗೆದ್ದು ಕ್ವಾಲಿಫೈರ್ 2 ಪಂದ್ಯ ಆಡುವ ಅರ್ಹತೆ ಪಡೆದು, ಬೆಂಗಳೂರು ಪಡೆಯ ಕಪ್ ಕನಸನ್ನು ಮತ್ತೊಮ್ಮೆ ಭಗ್ನಗೊಳಿಸಿತು.

ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರುವ ಪ್ರಕಾರ, 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಕಪ್​ ಗೆಲ್ಲದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಡೆ ಆಡಿರುವ ಅಷ್ಟು ಸೀಸನ್​ಗಳ ಅಷ್ಟು ಮ್ಯಾಚ್​ಗಳಲ್ಲಿ ಮನರಂಜನೆ ಕೊಡುವಲ್ಲಿ ಮಾತ್ರ ಎಂದಿಗೂ ವಿಫಲಗೊಂಡಿಲ್ಲ. ಆರ್​ಸಿಬಿ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ರನ್​ ಮಷಿನ್ ವಿರಾಟ್​ ಕೊಹ್ಲಿ ಅವರೇ ಬ್ರ್ಯಾಂಡ್​. ವಿರಾಟ್​ರ ಉಪಸ್ಥಿತಿ ಟೀಮ್​ನಲ್ಲಿದ್ದರೆ ಸಾಕು ಫ್ಯಾನ್ಸ್​ಗೆ ಬೇರೇನೂ ಬೇಕಿಲ್ಲ. ಎಲ್ಲರಂತೆ ತಮ್ಮ ತಂಡ ಕೂಡ ಒಂದು ಬಾರಿ ಕಪ್ ಗೆಲ್ಲಲಿ ಎಂಬ ಮಹಾದಾಸೆ ಹೊತ್ತು ಸ್ಟೇಡಿಯಂಗೆ ಬರುತ್ತಾರೆಯೇ ಹೊರತು ಸೋತ ತಕ್ಷಣ ಟೀಕಿಸಿ, ತಮ್ಮ ನೆಚ್ಚಿನ ಆಟಗಾರರನ್ನು ಕೆಳಗೆ ಹಾಕಿ ಮಾತನಾಡುವುದಿಲ್ಲ.

2008ರಿಂದಲೂ ಆರ್​ಸಿಬಿ ಅಭಿಮಾನಿಗಳ ಬಳಗ ದೊಡ್ಡದಾಗಿದೆಯೇ ವಿನಃ ಚಿಕ್ಕದಾಗಲೇ ಇಲ್ಲ, ಸಣ್ಣದಾಗಿಯೂ ಕಾಣಿಸಲಿಲ್ಲ. ತಮ್ಮನ್ನು ನೋಡಿ, ಪ್ರತಿ ಪಂದ್ಯದಲ್ಲೂ ಹುರಿದುಂಬಿಸುವ ಅಪಾರ ಸಂಖ್ಯೆಯ ನಿಷ್ಠಾವಂತ ಫ್ಯಾನ್ಸ್​ಗೆ ಗೆಲುವಿನ ಕಿರೀಟ ತೊಡಿಸಬೇಕು ಎಂದು ಪಣತೊಟ್ಟಿರುವ ವಿರಾಟ್​ ಕೊಹ್ಲಿ, ಇದೊಂದಕ್ಕಾಗಿ ಮೈದಾನದಲ್ಲಿ ಇಂದಿಗೂ ಚಿರ ಯುವಕನಂತೆ ಓಡಾಡಿ, ಗೆಲುವಿಗಾಗಿ ಶ್ರಮಿಸುತ್ತಾರೆ. ಇಷ್ಟಾದರೂ ಸಹ 17ನೇ ಆವೃತ್ತಿಯಲ್ಲಿಯೂ ಸಹ ಟ್ರೋಫಿಗೆ ಮುತ್ತಿಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ಯಾನ್ಸ್​ ಕೊಂಚ ನಿರಾಸೆಗೊಂಡಿದ್ದೇ ಆದರೂ 'ಮುಂದಿನ ಸಲ ಕಪ್ ನಮ್ದೇ' ಎಂಬ ಅದೇ ಭರವಸೆ, ಪ್ರೀತಿ, ಅಭಿಮಾನವನ್ನು ಬಿಡದೆ ಮುಂದುವರೆಸಿಕೊಂಡು ಬಂದಿದ್ದಾರೆ.

ಅಸಲಿಗೆ ಐಪಿಎಲ್​ ಇತಿಹಾಸದಲ್ಲಿಯೇ ಆರ್​ಸಿಬಿ ಅತ್ಯುತ್ತಮ ಫ್ರಾಂಚೈಸಿ ಎಂದರೆ ಖಂಡಿತ ತಪ್ಪಾಗಲಾರದು. ಒಂದೇ ಒಂದು ಬಾರಿ ಟ್ರೋಫಿ ನೋಡದಿದ್ದರೂ ಕೂಡ ಅಭಿಮಾನಿಗಳ ನೆಚ್ಚಿನ, ಅಚ್ಚುಮೆಚ್ಚಿನ ಫ್ರಾಂಚೈಸಿ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದೆ. ಇಂದಿಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಡೆ ಮೂರು ವಿಷಯಗಳಿಂದ ಬೆಸ್ಟ್​ ಫ್ರಾಂಚೈಸಿ ಎಂಬುದನ್ನು ನಾವು ಇಲ್ಲಿ ವಿವರಿಸಬಹುದು. ಅದು ಹೇಗೆ? ಎಂಬುದಕ್ಕೆ ಈ ಕೆಳಗಿನ ಕಾರಣಗಳನ್ನು ಗಮನಿಸಿ.

1. ವಿರಾಟ್​ ಕೊಹ್ಲಿ ಪ್ರಭಾವ:

ಕ್ರಿಕೆಟ್​ ಜಗತ್ತಿನ ದಂತಕಥೆ ವಿರಾಟ್. ಟೀಮ್ ಇಂಡಿಯಾ ಪರ ಸಾಕಷ್ಟು ದಾಖಲೆಗಳನ್ನು ತಮ್ಮ ಬ್ಯಾಟ್​ನಿಂದಲೇ ಬರೆದಿರುವ ವಿರಾಟ್​, ದೇಶವ್ಯಾಪಿ ಮಾತ್ರವಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಆರ್​ಸಿಬಿಯ ಹೃದಯಬಡಿತ ಆಗಿರುವ ಕೊಹ್ಲಿ, ಬೆಂಗಳೂರು ತಂಡದಲ್ಲಿ ದೊಡ್ಡ ಪಾತ್ರವನ್ನೇ ನಿರ್ವಹಿಸುತ್ತಾರೆ. ಫ್ರಾಂಚೈಸಿಯ ಅಭಿಮಾನಿಗಳು ಇಲ್ಲಿ ಟೀಮ್​ಗಿಂತ 'ರನ್​ ಮಷಿನ್'​ರನ್ನು ನೋಡಲು, ಪ್ರೋತ್ಸಾಹಿಸಲು ಬರುವುದೇ ಗಮನಾರ್ಹ. ಹುಚ್ಚು ಪ್ರೀತಿಯನ್ನು ವ್ಯಕ್ತಪಡಿಸುವ ಫ್ಯಾನ್ಸ್​, ವಿರಾಟ್​ ಮೈದಾನಕ್ಕೆ ಬಂದ್ರೆ ಮಾತ್ರ ತಮ್ಮ ಎನರ್ಜಿಯನ್ನು ಪ್ರದರ್ಶಿಸಲು ಬಯಸುತ್ತಾರೆ.

2. ಅತ್ಯುತ್ತಮ ಬ್ರ್ಯಾಂಡಿಂಗ್ ಮತ್ತು ಅಭಿಮಾನಿ ಬಳಗ:

ತಮ್ಮ ಫ್ರಾಂಚೈಸಿಯ ಬ್ರ್ಯಾಂಡಿಂಗ್ ಅನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಅಭಿಮಾನಿಗಳ ಜತೆ ಉತ್ತಮ ಒಡನಾಟ ಹೊಂದಿದೆ. ಪಂದ್ಯ, ಆಟಗಾರರ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಹಾಗೂ ಫ್ಯಾನ್ಸ್​ಗಳೊಂದಿಗೆ ಸಂಭಾಷಣೆ ನಡೆಸುವುದು, ಕಿರು ಸಂದರ್ಶನಗಳನ್ನು ಏರ್ಪಡಿಸುವುದು ಹೀಗೆ ನಾನಾ ರೀತಿಯಲ್ಲಿ ತಮ್ಮ ಅಭಿಮಾನಿ ಬಳಗವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದೆ. ಸೋಲೇ ಇರಲಿ, ಗೆಲುವೇ ಇರಲಿ ನಿರಂತರವಾಗಿ ಫ್ಯಾನ್ಸ್​ಗಳ ಮನವಿ, ಅಭಿಪ್ರಾಯಗಳನ್ನು ಸ್ವೀಕರಿಸುತ್ತ ಬಂದಿದೆ.

3. ಆಟದ ವೈಖರಿ, ತಂಡದ ಪ್ರದರ್ಶನ:

ವಿರಾಟ್​ರನ್ನು ಹೊರತುಪಡಿಸಿ ನೋಡುವುದಾದರೆ ತಂಡದ ಇತರೆ ಆಟಗಾರರು ಕೂಡ ಅದ್ಭುತ ಪ್ರದರ್ಶನ ತೋರುವ ಮುಖೇನ ಕ್ರಿಕೆಟ್ ಪ್ರಿಯರಲ್ಲಿ ಉತ್ಸಾಹ ಹೆಚ್ಚಿಸುತ್ತಾರೆ. ಕೇವಲ ಆಟ ಮಾತ್ರವಲ್ಲದೇ ಕ್ರೀಡಾಸ್ಪೂರ್ತಿಯನ್ನು ಮೆರೆಯುವ ಕ್ರಿಕೆಟಿಗರು ಮೈದಾನದಲ್ಲಿ ಒಳ್ಳೆಯ ಕ್ಷಣಗಳನ್ನು ತಮಗೆ ಹಾಗೂ ತಮ್ಮ ಫ್ಯಾನ್ಸ್​ಗಳಿಗೆ ರೂಪಿಸಿಕೊಟ್ಟಿದ್ದಾರೆ. ಈ ಹಿಂದೆ ಕ್ರೀಸ್​ ಗೇಲ್, ಎಬಿ ಡಿವಿಲಿಯರ್ಸ್​ ತಮ್ಮ ಬ್ಯಾಟಿಂಗ್ ಆರ್ಭಟದ ಮುಖೇನವೇ ಅಪಾರ ಸಂಖ್ಯೆಯ ಫ್ಯಾನ್ಸ್​ಗಳನ್ನು ಮನರಂಜಿಸಿ, ಅವರ ಪ್ರೀತಿಯನ್ನು ಗಳಿಸಿ, ದಾಖಲೆಗಳನ್ನು ನೆನಪಾಗಿ ಬಿಟ್ಟುಹೋಗಿದ್ದಾರೆ. ಈ ಎಲ್ಲಾ ಅಂಶಗಳು ಆರ್​ಸಿಬಿ ಐಪಿಎಲ್​ನ ಬೆಸ್ಟ್ ಫ್ರಾಂಚೈಸಿ ಎಂಬುದನ್ನು ಒತ್ತಿ ಹೇಳುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net