ನಾನು ಡಿಸಿಪಿ ಮಗ, ಸಿಎಂ ಸಿದ್ದರಾಮಯ್ಯ ಸಂಬಂಧಿ ಎಂದು ಹೇಳಿ ಸೆಕ್ಯೂರಿಟಿ ಮೇಲೆ ಹಲ್ಲೆ; ವಿಡಿಯೋ ವೈರಲ್​

Apartment Assault
Published on

ಬೆಂಗಳೂರು: ನಾನು ಡಿಸಿಪಿ ಮಗ, ಸಿಎಂ ಸಿದ್ದರಾಮಯ್ಯ ಅವರ ಸಂಬಂಧಿ ಎಂದು ಹೇಳಿಕೊಂಡು ಯುವಕನೋರ್ವ ಅಪಾರ್ಟ್​ಮೆಂಟ್​ ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಬೆಲೆಯ ಪ್ರಾವಿಡೆಂಟ್ ಸನ್​ವರ್ತ್​​ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

ಸೆಕ್ಯೂರಿಟಿ ಗಾರ್ಡ್​ ಪುನೀತ್​ ಮೇಲೆ ವರುಣ್​ (21) ಅಂಬಾತ ಹಲ್ಲೆ ನಡೆಸಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ವೈರಲ್​ ಆಗಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಹಲ್ಲೆಗೊಳಗಾದ ಪುನೀತ್ ಅವರು ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ದೊಡ್ಡಬೆಲೆಯ ಪ್ರಾವಿಡೆಂಟ್ ಸನ್​ವರ್ತ್​​ ಅಪಾರ್ಟ್​ಮೆಂಟ್​ಗೆ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ (ಸೆಪ್ಟೆಂಬರ್​ 21) ತಡರಾತ್ರಿ 12 ಗಂಟೆ ಸುಮಾರಿಗೆ ಯುವಕ ವರುಣ್ ಅಪಾರ್ಟ್ಮೆಂಟ್​ಗೆ ಇಬ್ಬರು ಯುವತಿಯರು ಹಾಗೂ ಓರ್ವ ಯುವಕನನ್ನು ಕರೆತಂದಿದ್ದ. ಯುವತಿಯರನ್ನು ಕರೆದುಕೊಂಡು ಬಂದ ಹಿನ್ನೆಲೆ ಅನುಮಾನಗೊಂಡ ಸೆಕ್ಯೂರಿಟಿ ಗಾರ್ಡ್, ರಾತ್ರಿ‌ 12 ಗಂಟೆ ನಂತರ ಅಪರಿಚಿತರಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ವರುಣ್, ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ ನಡೆಸಿದ್ದಾನೆ. ನಾನು ಯಾರ್ ಗೊತ್ತಾ ಡಿಸಿಪಿ ಮಗ, ಸಿಎಂ‌ ಸಿದ್ದರಾಮಯ್ಯ ನನ್ನ ಸಂಬಂಧಿ ಎಂದು ಹೇಳಿ ಯುವಕ ವರುಣ್​ ಪುನೀತ್​ ಮೇಲೆ ಹಲ್ಲೆ ನಡೆಸಿದ್ದಾನೆ.  ಕಿವಿ ಪರದೆ ಹರಿದು ಹೋಗುವ ಹಾಗೆ ಹಲ್ಲೆ ಮಾಡಲಾಗಿದೆ. ನನ್ನ ಕಿವಿ ಕೇಳಿಸುತ್ತಿಲ್ಲ ಎಂದು ಪುನೀತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ‌ಮೇಲೆ ಕಪಾಳ ಮೋಕ್ಷ ಮಾಡುವ ವಿಡಿಯೋ ರಿಕಾರ್ಡ್ ಆಗಿದೆ. ಅಲ್ಲೇ‌ ಇದ್ದ ಸ್ಥಳೀಯರು ಹಲ್ಲೆ ವಿಡಿಯೋ ರಿಕಾರ್ಡ್ ಮಾಡಿದ್ದಾರೆ. ಅಲ್ಲದೆ ವರುಣ್ ಯುವತಿಯರನ್ನು ಕರೆದುಕೊಂಡು ಬಂದ ದೃಶ್ಯಗಳು ಕೂಡ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net