

ನವದೆಹಲಿ: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಚೀಫ್ ಆಪರೇಟಿಂಗ್ ಆಫೀಸರ್ ಸಲ್ಮಾನ್ ನಸೀರ್ ಹಾಗೂ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ನಡುವಿನ ಖಾಸಗಿ ಚಾಟ್ ಬಹಿರಂಗಗೊಂಡಿದ್ದು, ಅದು ಪಾಕಿಸ್ತಾನದ ಮಾಜಿ ಕೋಚ್, ಖ್ಯಾತ ಕ್ರಿಕೆಟಿಗ್ ವಕಾರ್ ಯೂನಸ್ ಅವರನ್ನು ಸಿಟ್ಟಿಗೆಬ್ಬಿಸಿದೆ.
ಅವರಿಬ್ಬರ ನಡುವಿನ ಮಾತುಕತೆಯ ಕುರಿತ ವಿವರ ವಾಹಿನಿಯೊಂದರ ಟಾಕ್ಶೋನಲ್ಲಿ ಪ್ರಸಾರವಾಗಿ ಬಹಳಷ್ಟು ಜನರ ಗಮನ ಸೆಳೆದಿದೆ. ಈ ವಿಚಾರ ಬಳಿಕ ವಕಾರ್ ಯೂನಸ್ ಗಮನಕ್ಕೂ ಬಂದಿದ್ದು, ಅವರನ್ನು ಕೋಪಗೊಳ್ಳುವಂತೆ ಮಾಡಿದೆ.
ಅಫ್ಘಾನಿಸ್ತಾನ ತಂಡದ ಎದುರು ಪಾಕ್ ತಂಡದ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಜಾಕಾ ಅಶ್ರಫ್ ತಂಡದ ನಾಯಕ ಬಾಬರ್ ಅಜಮ್ ಕರೆಗೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ವಿವಾದಕ್ಕೆ ಕುರಿತಂತೆ ಬಾಬರ್ ಅಜಮ್ ಮತ್ತು ಸಲ್ಮಾನ್ ನಸೀರ್ ಮಧ್ಯೆ ನಡೆದ ಮಾತುಕತೆಗೆ ಸಂಬಂಧಿಸಿದ ಚಾಟ್ ಈ ಟಾಕ್ ಶೋನಲ್ಲಿ ಪ್ರಸಾರವಾಗಿತ್ತು.
'ನೀವು ಚೇರ್ಮನ್ಗೆ ಕರೆ ಮಾಡಿದ್ದೀರಿ, ಅವರು ಉತ್ತರಿಸಲಿಲ್ಲ ಎಂಬ ಸುದ್ದಿ ಟಿವಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ' ಎಂಬುದಾಗಿ ಸಲ್ಮಾನ್ ಬಾಬರ್ಗೆ ಮಾಡಿದ್ದ ಮೆಸೇಜ್ ಮತ್ತು ಅದಕ್ಕೆ ಬಾಬರ್ ಪ್ರತಿಕ್ರಿಯೆಗಳ ಸ್ಕ್ರೀನ್ಶಾಟ್ಗಳನ್ನು ಈ ಟಾಕ್ ಶೋನಲ್ಲಿ ಪ್ರಸಾರ ಮಾಡಲಾಗಿತ್ತು. ಅದಕ್ಕೆ ಬಾಬರ್, 'ಸಲಾಮ್ ಸಲ್ಮಾನ್ ಭಾಯ್, ನಾನು ಆ ಥರ ಯಾವುದೇ ಕರೆ ಮಾಡಿಲ್ಲ' ಎಂಬ ರಿಪ್ಲೈ ಮಾಡಿದ್ದ ಚಾಟ್ ಕೂಡ ಪ್ರಸಾರ ಮಾಡಲಾಗಿತ್ತು.
ಈ ಕುರಿತ ಟಾಕ್ ಶೋ ವೀಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಒಬ್ಬರು ಹಂಚಿಕೊಂಡಿದ್ದು, ಅದಕ್ಕೆ ವಕಾರ್ ಯೂನಸ್ ಪ್ರತಿಕ್ರಿಯೆ ನೀಡಿ ಕೋಪ ವ್ಯಕ್ತಪಡಿಸಿದ್ದಾರೆ. 'ನೀವೆಲ್ಲ ಏನು ಸಾಬೀತು ಮಾಡಲು ಹೊರಟಿದ್ದೀರಿ? ಖುಷಿಯಾದ್ರಾ ನೀವೆಲ್ಲ? ಇದು ಅತಿಯಾಯ್ತು, ದಯವಿಟ್ಟು ಬಾಬರ್ ಅಜಮ್ನನ್ನು ಬಿಟ್ಟುಬಿಡಿ, ಆತ ಪಾಕಿಸ್ತಾನ ಕ್ರಿಕೆಟ್ ತಂಡದ ಆಸ್ತಿ' ಎಂದು ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.