ಐಪಿಎಲ್ ಆಟಗಾರರ ಹರಾಜು ಯಾವಾಗ? ಎಲ್ಲಿ ನಡೆಯಲಿದೆ ಗೊತ್ತೇ?

ipl web
Published on

ನವದೆಹಲಿ: ಮುಂಬರುವ ಐಪಿಎಲ್ 14ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ. ಹರಾಜು ದಿನಾಂಕ ಮತ್ತು ಸ್ಥಳದ ಮಾಹಿತಿಯನ್ನು ಐಪಿಎಲ್ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಲಾಗಿದೆ.

ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯ ಮುಗಿದ ಮರುದಿನವೇ ಹರಾಜು ಪ್ರಕ್ರಿಯೆ ನಿಗದಿಯಾಗಿದೆ. ಮೊದಲೆರಡು ಟೆಸ್ಟ್ ಪಂದ್ಯಗಳೂ ಚೆನ್ನೈನಲ್ಲೇ ನಡೆಯಲಿವೆ. ಫೆಬ್ರವರಿ 5ರಂದು ಟೆಸ್ಟ್ ಸರಣಿ ಆರಂಭವಾಗಲಿದ್ದು, ಫೆಬ್ರವರಿ 13ರಿಂದ 17ರವರೆಗೆ 2ನೇ ಟೆಸ್ಟ್ ಪಂದ್ಯ ನಡೆಯಲಿದೆ.

ಆಟಗಾರ ರಿಟೇನ್ ಪ್ರಕ್ರಿಯೆ ಜನವರಿ 20ರಂದೇ ಮುಕ್ತಾಯಗೊಂಡಿದ್ದು, ಎಲ್ಲ 8 ತಂಡಗಳು ಕೆಲ ಪ್ರಮುಖ ಆಟಗಾರರನ್ನು ಹರಾಜು ಪ್ರಕ್ರಿಯೆಗೆ ಬಿಟ್ಟುಕೊಟ್ಟಿವೆ. ಈ ನಡುವೆ ಆಟಗಾರರ ವರ್ಗಾವಣೆಗೆ ಫೆಬ್ರವರಿ 8ರವರೆಗೆ ಕಾಲಾವಕಾಶ ನೀಡಲಾಗಿದೆ.

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಆರನ್ ಫಿಂಚ್, ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್, ಭಾರತದ ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಪೀಯುಷ್ ಚಾವ್ಲಾ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ತಾರೆಯರು.

ಸದ್ಯ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ನಿರ್ವಹಣೆಯೂ ಫ್ರಾಂಚೈಸಿಗಳಿಗೆ ದೇಶೀಯ ಆಟಗಾರರ ಖರೀದಿ ವೇಳೆ ನೆರವಿಗೆ ಬರಲಿದೆ. 8 ತಂಡಗಳು ಒಟ್ಟು 139 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, 57 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ಒಟ್ಟು 85 ಕೋಟಿ ರೂ. ಬಜೆಟ್‌ನಲ್ಲಿ ತಂಡಗಳು ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಖರೀದಿಸಲು ಉಳಿಸಿಕೊಂಡಿರುವ ಮೊತ್ತದ ವಿವರ ಹೀಗಿದೆ: ಕಿಂಗ್ಸ್ ಇಲೆವೆನ್ ಪಂಜಾಬ್: 53.20 ಕೋಟಿ ರೂ.; ಆರ್‌ಸಿಬಿ: 35.90 ಕೋಟಿ ರೂ; ರಾಜಸ್ಥಾನ ರಾಯಲ್ಸ್: 34.85 ಕೋಟಿ ರೂ; ಸಿಎಸ್‌ಕೆ: 22.90 ಕೋಟಿ ರೂ; ಮುಂಬೈ ಇಂಡಿಯನ್ಸ್: 15.35 ಕೋಟಿ ರೂ; ಡೆಲ್ಲಿ ಕ್ಯಾಪಿಟಲ್ಸ್: 12.90 ಕೋಟಿ ರೂ; ಕೆಕೆಆರ್: 10.75 ಕೋಟಿ ರೂ; ಸನ್‌ರೈಸರ್ಸ್‌: 10.75 ಕೋಟಿ ರೂ.

ಪ್ರತಿ ತಂಡ ಹರಾಜಿನಲ್ಲಿ ಖರೀದಿಸಬಹುದಾದ ಗರಿಷ್ಠ ಆಟಗಾರರ ಸಂಖ್ಯೆ ಹೀಗಿದೆ (ಗರಿಷ್ಠ 25 ಆಟಗಾರರ ತಂಡ): ಕಿಂಗ್ಸ್ ಇಲೆವೆನ್ ಪಂಜಾಬ್: 9 (5 ವಿದೇಶಿ); ಆರ್‌ಸಿಬಿ: 13 (4 ವಿದೇಶಿ); ರಾಜಸ್ಥಾನ ರಾಯಲ್ಸ್: 8 (3 ವಿದೇಶಿ); ಸಿಎಸ್‌ಕೆ: 7 (1 ವಿದೇಶಿ); ಮುಂಬೈ ಇಂಡಿಯನ್ಸ್: 7 (4 ವಿದೇಶಿ); ಡೆಲ್ಲಿ ಕ್ಯಾಪಿಟಲ್ಸ್: 6 (2 ವಿದೇಶಿ); ಕೆಕೆಆರ್: 8 (2 ವಿದೇಶಿ); ಸನ್‌ರೈಸರ್ಸ್‌: 3 (1 ವಿದೇಶಿ).

ಈ ಬಾರಿ ಭಾರತದಲ್ಲೇ ಐಪಿಎಲ್?

ಈ ವರ್ಷ ಐಪಿಎಲ್ ಟೂರ್ನಿ ನಡೆಯುವ ತಾಣ ಇನ್ನೂ ಅಂತಿಮಗೊಂಡಿಲ್ಲ. ಆದರೆ, ಕರೊನಾ ಹಾವಳಿಯ ನಡುವೆ ಟೂರ್ನಿಯನ್ನು ಈ ಬಾರಿ ಭಾರತದಲ್ಲೇ ಆಯೋಜಿಸಲು ಆದ್ಯತೆ ನೀಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳುತ್ತ ಬಂದಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸರಾಗವಾಗಿ ನಡೆದರೆ, ಐಪಿಎಲ್ ಟೂರ್ನಿಯನ್ನು ಈ ಬಾರಿ ಸ್ಥಳಾಂತರ ಮಾಡಲು ಯಾವುದೂ ಸಕಾರಣ ಲಭಿಸುವುದಿಲ್ಲ. ಟೂರ್ನಿ ಭಾರತದಲ್ಲಿ ನಡೆಯುವುದೇ ಅಥವಾ ವಿದೇಶದಲ್ಲಿ ನಡೆಯುವುದೇ ಎಂಬುದು ಕೂಡ ತಂಡಗಳಿಗೆ ಹರಾಜಿನಲ್ಲಿ ಹೊಸ ಆಟಗಾರರ ಖರೀದಿಯ ಕಾರ್ಯತಂತ್ರ ರೂಪಿಸಲು ಪ್ರಮುಖವೆನಿಸಲಿದೆ. ಕಳೆದ ವರ್ಷ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್, 6 ತಿಂಗಳು ತಡವಾಗಿ ಸೆಪ್ಟೆಂಬರ್-ನವೆಂಬರ್‌ನಲ್ಲಿ ಯುಎಇಯಲ್ಲಿ ನಡೆದಿತ್ತು.

ಹರಾಜಿಗೆ ಹಾಜರಾಗುವವರ 2 ನೆಗೆಟಿವ್ ವರದಿ ಕಡ್ಡಾಯ

ಐಪಿಎಲ್ ಹರಾಜು ಪ್ರಕ್ರಿಯೆಗೆ ಹಾಜರಾಗುವ ಫ್ರಾಂಚೈಸಿಗಳ ಮಾಲೀಕರು ಮತ್ತು ಇತರ ಪ್ರತಿನಿಧಿಗಳಿಗೆ ಕ್ವಾರಂಟೈನ್ ಇರುವುದಿಲ್ಲ. ಆದರೆ 72 ಗಂಟೆಗಳ ಮುನ್ನ ಕೋವಿಡ್-19 ಪರೀಕ್ಷೆಗೆ ಒಳಗಾದ 2 ನೆಗೆಟಿವ್ ವರದಿಗಳನ್ನು ಅವರು ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಚೆನ್ನೈನ ಗ್ರಾಂಡ್ ಚೋಲಾ ಹೋಟೆಲ್‌ಗೆ ಆಮಿಸಿದಂದು ಮತ್ತು ಹರಾಜಿನ ದಿನ ಈ ಪರೀಕ್ಷೆಗೆ ಒಳಗಾಗಬೇಕಿದೆ. ಫ್ರಾಂಚೈಸಿಯೊಂದರಿಂದ ಗರಿಷ್ಠ 13 ಸದಸ್ಯರು ಹರಾಜಿಗೆ ಹಾಜರಾಗಲು ಅವಕಾಶವಿದ್ದು, ಈ ಪೈಕಿ 8 ಸದಸ್ಯರಷ್ಟೇ ಹರಾಜು ಟೇಬಲ್‌ನಲ್ಲಿ ಕುಳಿತುಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net