

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮುನ್ನ ತಂಡದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಗಾಯಗೊಂಡು ಅಲಭ್ಯರಾಗಿದ್ದರು. ಭಾರತ ತಂಡಕ್ಕೆ ಈ ದೊಡ್ಡ ಆಘಾತ ಎದುರಾದಾಗ, ಅಶ್ವಿನ್ ಸ್ಥಾನವನ್ನು ತುಂಬಿದವರು ತಮಿಳುನಾಡಿನ ಮತ್ತೋರ್ವ ಆಟಗಾರ ವಾಷಿಂಗ್ಟನ್ ಸುಂದರ್. ಅಶ್ವಿನ್ ಗೈರು ಹಿನ್ನಡೆಯಾಗಿ ಪರಿಣಮಿಸದಂತೆ ನೋಡಿಕೊಂಡಿದ್ದು, ಮಾತ್ರವಲ್ಲದೆ ಆಲ್ರೌಂಡ್ ನಿರ್ವಹಣೆಯ ಮೂಲಕ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಭಾರತ ತಂಡದ ಗೆಲುವಿನಲ್ಲೂ ವಾಷಿಂಗ್ಟನ್ ಸುಂದರ್ ಪ್ರಮುಖ ಪಾತ್ರ ವಹಿಸಿದ್ದರು.
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿಯೂ ಆಡುವ 21 ವರ್ಷದ ವಾಷಿಂಗ್ಟನ್ ಸುಂದರ್ ಅವರದು ಒಂದು ರೀತಿಯಲ್ಲಿ ಕ್ರಿಕೆಟ್ ಕುಟುಂಬವಾಗಿದೆ. ಯಾಕೆಂದರೆ ಅವರ ತಂದೆ ಎಂ. ಸುಂದರ್ ಕೂಡ ಕ್ರಿಕೆಟಿಗರಾಗಿದ್ದರು. 1990ರ ದಶಕದಲ್ಲಿ ಎಂ. ಸುಂದರ್ ತಮಿಳುನಾಡಿನ ರಣಜಿ ಟ್ರೋಫಿ ಸಂಭಾವ್ಯರಲ್ಲೂ ಸ್ಥಾನ ಪಡೆದಿದ್ದರು. ಆದರೆ ಬಳಿಕ ರಾಜ್ಯ ತಂಡದ ಪರ ಆಡುವ ಕನಸು ನನಸಾಗಿರಲಿಲ್ಲ. ಇದೀಗ ಅವರ ಪುತ್ರ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ತಂಡದ ಪರ ಆಡುವ ಕನಸನ್ನೂ ನನಸು ಮಾಡಿಕೊಂಡಿದ್ದಾರೆ.
ಇನ್ನು ವಾಷಿಂಗ್ಟನ್ ಸುಂದರ್ ಅವರ ಅಕ್ಕ ಶೈಲಜಾ ಕೂಡ ವೃತ್ತಿಪರ ಕ್ರಿಕೆಟಿಗರಾಗಿದ್ದಾರೆ. ತಮಿಳುನಾಡು ರಾಜ್ಯ ತಂಡದ ಪರವಾಗಿಯೂ ಶೈಲಜಾ ಆಡಿದ್ದಾರೆ. ಜತೆಗೆ ತಮ್ಮನ ಕ್ರಿಕೆಟ್ ಏಳ್ಗೆಯಲ್ಲೂ ಅಕ್ಕ ಪ್ರಮುಖ ಪಾತ್ರ ನಿರ್ವಹಿಸುತ್ತ ಬಂದಿದ್ದಾರೆ. ಅಕ್ಕ-ತಮ್ಮ ಜತೆಯಾದಾಗ ಕ್ರಿಕೆಟ್ ಬಗ್ಗೆಯೇ ಸಾಕಷ್ಟು ಚರ್ಚೆಗಳನ್ನು ನಡೆಸುತ್ತಾರಂತೆ.
ವಾಷಿಂಗ್ಟನ್ ಸುಂದರ್‌ಗಿಂತ 8 ವರ್ಷ ಹಿರಿಯಳಾಗಿರುವ ಶೈಲಜಾ, ಬಲಗೈ ಬ್ಯಾಟುಗಾರ್ತಿ ಮತ್ತು ಲೆಗ್ ಸ್ಪಿನ್ನರ್ ಆಗಿದ್ದಾರೆ. ಬಾಲ್ಯದ ದಿನಗಳಲ್ಲಿ ವಾಷಿಂಗ್ಟನ್‌ರನ್ನು ಔಟ್ ಮಾಡಿರುವ ಕ್ಷಣಗಳನ್ನೂ ಅಕ್ಕ ಶೈಲಜಾ ಈಗ ನೆನಪು ಮಾಡಿಕೊಂಡಿದ್ದಾರೆ. ಇನ್ನು ಅಕ್ಕ ತಮ್ಮನ ಆಟದ ದೋಷಗಳನ್ನೂ ತಿದ್ದುತ್ತಿರುತ್ತಾರಂತೆ. ಅಕ್ಕನ ಸಾಕಷ್ಟು ಸಲಹೆಗಳು ನನಗೆ ನೆರವಾಗಿವೆ ಎಂದೂ ವಾಷಿಂಗ್ಟನ್ ಹೇಳುತ್ತಾರೆ.