More

    ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವದ ಬಗ್ಗೆ ಭಾರಿ ಚರ್ಚೆ; ವಿರಾಟ್ ಕೊಹ್ಲಿ V/s ಅಜಿಂಕ್ಯ ರಹಾನೆ

    ಬೆಂಗಳೂರು: ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವಿನ ಸಾಧನೆ ತೋರಿದ ಬೆನ್ನಲ್ಲೇ ಹಲವು ಮಂದಿ ಇದರ ಶ್ರೇಯವನ್ನು ಹಂಚಿಕೊಂಡಿದ್ದಾರೆ. ತಂಡದ ನಾಯಕರಾಗಿ ಅಜಿಂಕ್ಯ ರಹಾನೆ ಕೂಡ ತಂಡದ ಯಶಸ್ಸಿನಲ್ಲಿ ಸಾಕಷ್ಟು ಪಾಲು ಪಡೆದಿದ್ದಾರೆ. ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದಾಗ ಅಜಿಂಕ್ಯ ರಹಾನೆ, ಯಾವುದೇ ರೀತಿಯಲ್ಲೂ ಅವರ ಕೊರತೆ ಕಾಡದಂತೆ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಇದರಿಂದಾಗಿ ಈಗ, ಭಾರತೀಯ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿಗಿಂತ ಅಜಿಂಕ್ಯ ರಹಾನೆ ಅವರೇ ಉತ್ತಮವೇ ಎಂಬ ಚರ್ಚೆ ಶುರುವಾಗಿದೆ.

    ಶಾಂತಚಿತ್ತದ ರಹಾನೆಗೆ ನಾಯಕತ್ವ ವಹಿಸಬೇಕೆಂಬ ಬೇಡಿಕೆಯ ನಡುವೆ, ಆಕ್ರಮಣಕಾರಿ ಸ್ವಭಾವದ ವಿರಾಟ್ ಕೊಹ್ಲಿ ಅವರೇ ನಾಯಕರಾಗಿ ಮುಂದುವರಿಯಲಿ ಎಂಬ ವಾದವಿದೆ. ಇವೆಲ್ಲದರ ನಡುವೆ ಸದ್ಯಕ್ಕಂತೂ ಕೊಹ್ಲಿ ನಾಯಕತ್ವ ಸುರಕ್ಷಿತವೆನಿಸಿದೆ. ಆದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಭಾರತ ತಂಡ ಯಾವ ರೀತಿಯ ನಿರ್ವಹಣೆ ತೋರಲಿದೆ ಎಂಬುದು ಕೂಡ ಕೊಹ್ಲಿ ನಾಯಕರಾಗಿ ಮುಂದುವರಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ.
    ಆಸೀಸ್ ನೆಲದಲ್ಲಿ ಭಾರತ ತಂಡ ಕಂಡ ಯಶಸ್ಸಿನಲ್ಲಿ ರಹಾನೆ ಅವರ ತಾಳ್ಮೆಯ ವರ್ತನೆ ಸಾಕಷ್ಟು ಗಮನ ಸೆಳೆದಿದೆ. ಇದರ ನಡುವೆಯೂ ಅವರು ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಗೆ ಉಪನಾಯಕನ ಸ್ಥಾನಕ್ಕೆ ಮರಳಿದ್ದಾರೆ. ಪಿತೃತ್ವ ರಜೆ ಮುಗಿಸಿ ಮರಳಿದಾಗ ಕೊಹ್ಲಿ ಅವರೇ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?

    ಒಂದು ತಿಂಗಳ ಹಿಂದೆ ಅಡಿಲೇಡ್‌ನಲ್ಲಿ ಕೊಹ್ಲಿ ತಂಡವನ್ನು ತೊರೆದಾಗ, 36 ರನ್‌ಗೆ ಆಲೌಟ್ ಆಗಿ ಕುಗ್ಗಿಹೋಗಿತ್ತು. ಆ ಬಳಿಕ ತಂಡ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಆಟಗಾರರ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಿದೆ. ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮ, ಆರ್. ಅಶ್ವಿನ್, ಚೇತೇಶ್ವರ ಪೂಜಾರ ಅವರ ಅಭಿಪ್ರಾಯಗಳಿಗೂ ಬೆಲೆ ದೊರೆತಿದೆ ಎನ್ನಲಾಗುತ್ತಿದೆ. ಆಸೀಸ್ ವಿರುದ್ಧ ಸರಣಿಯಲ್ಲಿ ರಿಷಭ್ ಪಂತ್ (274) ಮತ್ತು ಚೇತೇಶ್ವರ ಪೂಜಾರ (271) ಬಳಿಕ ರಹಾನೆ (268) 3ನೇ ಗರಿಷ್ಠ ರನ್‌ಸ್ಕೋರರ್ ಎನಿಸಿದ್ದರು. ನಾಯಕತ್ವದ ಹೊಣೆ ಅವರ ಬ್ಯಾಟಿಂಗ್ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಮತ್ತೊಂದೆಡೆ ಕೊಹ್ಲಿ ಕಳೆದೊಂದು ವರ್ಷದಿಂದ ಶತಕ ಸಿಡಿಸದೆ ಪರದಾಡುತ್ತಿದ್ದಾರೆ.

    ಕ್ಯಾಪ್ಟನ್ ಕೊಹ್ಲಿ ಪರ ವಾದವೇನು?
    ಇನ್ನು ಕೊಹ್ಲಿ ನಾಯಕತ್ವದ ಪರ ನಿಲ್ಲುವ ವಾದದ ಪ್ರಕಾರ, ಈಗಿನ ತಂಡದ ಬಹುತೇಕ ಆಟಗಾರರು ಕೊಹ್ಲಿ ನಾಯಕತ್ವದಲ್ಲಿಯೇ ಬೆಳೆದವರು. ಈಗ ಪ್ರದರ್ಶಿಸಿರುವ ಕೆಚ್ಚೆದೆಯ ನಿರ್ವಹಣೆ, ಹೋರಾಟ ಮನೋಭಾವವನ್ನು ತಂಡದಲ್ಲಿ ಬೆಳೆಸಿದವರು ಕೊಹ್ಲಿಯೇ ಆಗಿದ್ದಾರೆ. 2 ವರ್ಷಗಳ ಹಿಂದೆಯಷ್ಟೇ ಭಾರತ ತಂಡ ಕೊಹ್ಲಿ ನಾಯಕತ್ವದಲ್ಲೂ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆಲುವು ದಾಖಲಿಸಿತ್ತು ಎಂಬುದನ್ನು ಮರೆಯಬಾರದು ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೇರಿದೆ. ಹೀಗಾಗಿ ಕೆಲವೇ ಟೆಸ್ಟ್‌ಗಳಲ್ಲಿ ಅವರ ಗೈರಿನಲ್ಲಿ ತಂಡ ತೋರಿದ ನಿರ್ವಹಣೆಯಿಂದ ಅವರ ನಾಯಕತ್ವವನ್ನು ಅಳೆಯುವುದು ನ್ಯಾಯೋಚಿತವಲ್ಲ. ಕೊಹ್ಲಿ ಪಿತೃತ್ವ ರಜೆಯಿಂದ ನಿರ್ಗಮಿಸಿದ ಕಾರಣಕ್ಕೆ ಅವರ ಪಟ್ಟ ಕಸಿಯುವುದು ಸರಿಯಲ್ಲ. ಭಾರತ ತಂಡ ಅವರದೇ ನಾಯಕತ್ವದಲ್ಲಿ ಆಡಿ ಹೀನಾಯ ಸೋಲು ಕಂಡಿದ್ದರೆ ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿರುತ್ತಿತ್ತು ಎಂದೂ ವಾದ ಮಂಡಿಸಲಾಗುತ್ತಿದೆ.

    ಇದನ್ನೂ ಓದಿ: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಆಸೀಸ್ ಕ್ರಿಕೆಟ್‌ನಲ್ಲಿ ತಲೆದಂಡಕ್ಕೆ ಸಿದ್ಧತೆ!

    ಕೊಹ್ಲಿಗೆ ಇಂಗ್ಲೆಂಡ್ ಸರಣಿ ನಿರ್ಣಾಯಕ
    ಭಾರತ ತಂಡ ಫೆಬ್ರವರಿ 5ರಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್‌ಗೇರುವ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಇನ್ನು ನಾಯಕರಾಗಿ ತಂಡಕ್ಕೆ ಮರಳುತ್ತಿರುವ ಕೊಹ್ಲಿಗೂ ಇದು ನಿರ್ಣಾಯಕ ಸರಣಿ. ಈಗಾಗಲೆ ರಹಾನೆಗೆ ಪೂರ್ಣಪ್ರಮಾಣದ ಟೆಸ್ಟ್ ನಾಯಕತ್ವ ವಹಿಸಬೇಕು ಎಂಬ ಚರ್ಚೆ ನಡೆಯುತ್ತಿದ್ದು, ಇದಕ್ಕೆ ವಿರಾಮ ಹಾಕಬೇಕಾದರೆ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಕೊಹ್ಲಿ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಬೇಕಾಗಿರುವುದು ಅನಿವಾರ‌್ಯವೆನಿಸಿದೆ. ಇಲ್ಲದಿದ್ದರೆ ರಹಾನೆ ನಾಯಕರಾಗಲಿ ಎಂಬ ಕೂಗು ಇನ್ನಷ್ಟು ಜೋರಾಗಬಹುದು.

    ನಾಯಕತ್ವದ ವ್ಯತ್ಯಾಸವೇನು?
    ಆಕ್ರಮಣಕಾರಿ ಮತ್ತು ಶಾಂತ ವ್ಯಕ್ತಿತ್ವಗಳಲ್ಲದೆ ಕೊಹ್ಲಿ-ರಹಾನೆ ನಾಯಕತ್ವದ ಕಾರ್ಯತಂತ್ರಗಳ ನಡುವೆಯೂ ಹಲವು ವ್ಯತ್ಯಾಸಗಳೂ ಇವೆ. ವೇಗಿ ಇಶಾಂತ್ ಶರ್ಮ ಈ ಹಿಂದೆ ಹೇಳಿರುವ ಪ್ರಕಾರ, ರಹಾನೆ ‘ಬೌಲರ್‌ಗಳ ನಾಯಕ’! ರಹಾನೆ ಬೌಲರ್‌ಗಳನ್ನು ಕೊಹ್ಲಿಗಿಂತ ಹೆಚ್ಚು ನಂಬುತ್ತಾರೆ. ರಹಾನೆ ಬೌಲರ್‌ಗಳಿಗೆ ಹೆಚ್ಚಿನ ಸ್ಪೆಲ್ ಬೌಲಿಂಗ್ ನೀಡುವುದರಿಂದ ಇದನ್ನು ಗಮನಿಸಬಹುದು. ಕೊಹ್ಲಿ ವಿಕೆಟ್ ಬೀಳದೆ ಇದ್ದಾಗ ತಾಳ್ಮೆ ಕಳೆದುಕೊಂಡು ಕೂಡಲೆ ಬೌಲಿಂಗ್ ಬದಲಾವಣೆ ಮಾಡಿಬಿಡುತ್ತಾರೆ. ರಹಾನೆ ಬೌಲರ್‌ಗಳಿಗೆ ಬೇಕಾದಂತೆ ಫೀಲ್ಡಿಂಗ್ ವ್ಯೆಹ ರಚಿಸಲು ಸಹಕರಿಸುತ್ತಾರೆ. ಕೊಹ್ಲಿ ಅವರಾದರೆ, ‘ಅದೇಕೆ ಹಾಗೆ, ಹೀಗೆ ಮಾಡು’ ಎಂದು ಕೆಲವೊಮ್ಮೆ ಬೌಲರ್‌ಗಳಿಗೆ ತಗಾದೆ ಎತ್ತುತ್ತಾರೆ. ಕೊಹ್ಲಿ ನಾಯಕತ್ವದಲ್ಲಿ ಆಟಗಾರರು ಮೈದಾನಕ್ಕಿಳಿದು ಗುಂಪುಗೂಡಿ ನಿಂತಾಗ ಅವರೊಬ್ಬರೇ ಮಾತನಾಡುತ್ತಾರೆ. ಅದೇ ರಹಾನೆ ನಾಯಕತ್ವದಲ್ಲಿ ಹಿರಿಯ ಆಟಗಾರ ಅಶ್ವಿನ್‌ಗೂ ಮಾತನಾಡುವ ಅವಕಾಶ ಲಭಿಸಿತ್ತು. ರಹಾನೆ ಸಾರಥ್ಯದಲ್ಲಿ ಭಾರತ ತಂಡ ಡಿಆರ್‌ಎಸ್‌ಗಳನ್ನೂ ಜಾಣ್ಮೆಯಿಂದ ಬಳಸಿಕೊಂಡಿತು. ಕೊಹ್ಲಿ ಅವರಾದರೆ ಅವಸರಕ್ಕೆ ಬಿದ್ದು ಕೆಲವೊಮ್ಮೆ ಡಿಆರ್‌ಎಸ್‌ಗಳನ್ನು ವ್ಯರ್ಥಗೊಳಿಸುತ್ತಾರೆ. ಇನ್ನು ಜನಾಂಗೀಯ ನಿಂದನೆಯ ಪ್ರಕರಣ ನಡೆದಾಗಲೂ ರಹಾನೆ ಎಚ್ಚರಿಕೆಯಿಂದ ಇದನ್ನು ನಿಭಾಯಿಸಿದರು. ನಿಂದನೆಗೆ ಒಳಗಾದ ಸಿರಾಜ್ ಹೇಳಿರುವಂತೆ, ಅಂಪೈರ್‌ಗಳು ಭಾರತ ತಂಡಕ್ಕೆ ಸಿಡ್ನಿ ಟೆಸ್ಟ್ ತ್ಯಜಿಸುವ ಆರ್ ನೀಡಿದ್ದರು. ಆದರೆ ರಹಾನೆ ಅದಕ್ಕೆ ಒಪ್ಪಲಿಲ್ಲ. ಕೊಹ್ಲಿ ಅವರಾದರೆ ಆಕ್ರಮಣಕಾರಿಯಾಗಿ ಬೇರೆ ರೀತಿ ಚಿಂತಿಸುವ ಸಾಧ್ಯತೆ ಇತ್ತು.

    ಟೆಸ್ಟ್ ನಾಯಕತ್ವ ದಾಖಲೆ
    ವಿರಾಟ್ ಕೊಹ್ಲಿ:
    ಪಂದ್ಯ: 56
    ಜಯ: 33
    ಸೋಲು: 13
    ಡ್ರಾ: 10
    ಗೆಲುವಿನ ಸರಾಸರಿ: 58.92
    ಅಜಿಂಕ್ಯ ರಹಾನೆ:
    ಟೆಸ್ಟ್: 5
    ಜಯ: 4
    ಸೋಲು: 0
    ಡ್ರಾ: 1
    ಗೆಲುವಿನ ಸರಾಸರಿ: 80.00

    ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ, ಜೋಶಿಗೂ ಸಲ್ಲಲಿ ಅಭಿನಂದನೆ

    VIDEO: ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಮರಳಿದ ಅಜಿಂಕ್ಯ ರಹಾನೆಗೆ ಅದ್ದೂರಿ ಸ್ವಾಗತ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts