More

    VIDEO: ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಮರಳಿದ ಅಜಿಂಕ್ಯ ರಹಾನೆಗೆ ಅದ್ದೂರಿ ಸ್ವಾಗತ..

    ಮುಂಬೈ: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಮರಳಿದ ಭಾರತ ತಂಡದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಮುಂಬೈಗೆ ಬಂದಿಳಿದ ಮುಖ್ಯಕೋಚ್ ರವಿ ಶಾಸ್ತ್ರಿ, ಅಜಿಂಕ್ಯ ರಹಾನೆ, ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ವೇಗಿ ಶಾರ್ದೂಲ್ ಠಾಕೂರ್, ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಷಾಗೆ ಮುಂಬೈ ಕ್ರಿಕೆಟ್ ಸಂಸ್ಥೆ ವತಿಯಿಂದ ಸ್ವಾಗತ ಕೋರಲಾಯಿತು. ಬ್ರಿಸ್ಬೇನ್‌ನಲ್ಲಿ ನಡೆದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಹೀರೋ ರಿಷಭ್ ಪಂತ್ ಗುರುವಾರ ಮುಂಜಾನೆ ನವದೆಹಲಿಗೆ ಬಂದಿಳಿದರು. ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಮುನ್ನಡೆಸಿದ್ದ ಅಜಿಂಕ್ಯ ರಹಾನೆ ನಿವಾಸದ ಬಳಿಯೂ ಸಂಭ್ರಮ ಮುಗಿಲು ಮುಟ್ಟಿತು.

    ಇದನ್ನೂ ಓದಿ: ಆಸೀಸ್‌ನಲ್ಲಿ ಭಾರತದ ದಿಗ್ವಿಜಯಕ್ಕೆ ಪಾಕ್ ಕ್ರಿಕೆಟಿಗರಿಂದಲೂ ಪ್ರಶಂಸೆ

    ರಹಾನೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಿಸಿದರು. ರಹಾನೆ ನಿವಾಸವಿರುವ ಮುಂಬೈ ಸಬ್‌ಅರ್ಬನ್ ಮಾತುಂಗಾ ಪ್ರದೇಶದ ಜನರು ಹೂಗಳನ್ನು ಎಸೆಯುವ ಮೂಲಕ ಸ್ವಾಗತ ಕೋರಿದರು. ಇದೇ ವೇಳೆ ಡೊಳ್ಳಿನ ವಾದ್ಯ ಕೂಡ ಏರ್ಪಡಿಸಲಾಗಿತ್ತು. ರಹಾನೆ ಅವರೊಂದಿಗೆ ಪತ್ನಿ ರಾಧಿಕಾ ಹಾಗೂ ಎರಡು ವರ್ಷದ ಪುತ್ರಿ ಆರ್ಯ ಕೂಡ ಸೇರಿಕೊಂಡರು. ರಹಾನೆ ಸಾರಥ್ಯದ ಭಾರತ ತಂಡ 2-1 ರಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಗೆದ್ದುಕೊಂಡಿತು. ಬ್ರಿಸ್ಬೇನ್‌ನಲ್ಲಿ ನಡೆದ 4ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿ ಈ ಸಾಧನೆ ಮಾಡಿತ್ತು. ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಪಿತೃತ್ವ ರಜೆ ಮೇಲೆಗೆ ತವರಿಗೆ ವಾಪಸಾಗಿದ್ದರು.

    ಇದನ್ನೂ ಓದಿ: ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್​ ಕೀಪರ್-ಬ್ಯಾಟ್ಸ್‌ಮನ್

    ವೇಗಿ ಮೊಹಮದ್ ಸಿರಾಜ್ ಹೈದರಾಬಾದ್‌ಗೆ ಬಂದಿಳಿದ ಕೂಡಲೇ ನೇರವಾಗಿ ಅವರ ತಂದೆ ಸಮಾಧಿ ಬಳಿ ತೆರಳಿ ದರ್ಶನ ಪಡೆದರು. ಆಟೋ ಚಾಲಕರಾಗಿದ್ದ ಮೊಹಮದ್ ಸಿರಾಜ್ ತಂದೆ ಮೊಹಮದ್ ಗೌಸ್ ನವೆಂಬರ್ 20 ರಂದು ನಿಧನರಾದರು. ಈ ವೇಳೆ ಅಂತಿಮ ದರ್ಶನ ಪಡೆಯಲು ತವರಿಗೆ ಮರಳದೆ ಆಸ್ಟ್ರೇಲಿಯಾ ಪ್ರವಾಸದಲ್ಲೇ ಸಿರಾಜ್ ಮುಂದುವರಿದಿದ್ದರು. ಸಿರಾಜ್ ಟೆಸ್ಟ್ ಸರಣಿಯಲ್ಲಿ ಆಡಿದ 3 ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದರು. ಜತೆಗೆ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಬ್ರಿಸ್ಬೇನ್‌ನಲ್ಲಿ ಐದು ವಿಕೆಟ್‌ಗೊಂಚಲು ಪಡೆದು ಆಸೀಸ್‌ಗೆ ಕಡಿವಾಣ ಹೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts