

ಮುಂಬೈ: ಮುಂಬರುವ ಭಾರತ ಹಾಗೂ ಶ್ರೀಲಂಕಾ ನಡುವಿನ ನಿಗದಿತ ಓವರ್‌ಗಳ ಸರಣಿಯ 6 ಪಂದ್ಯಗಳು ಕೊಲಂಬೊದಲ್ಲಿರುವ ಆರ್.ಪ್ರೇಮದಾಸ ಸ್ಟೇಡಿಯಂನಲ್ಲೇ ನಡೆಯಲಿವೆ. ಟೂರ್ನಿಯ ನೇರಪ್ರವಾರ ಮಾಡಲಿರುವ ಸೋನಿ ನೆಟ್‌ವರ್ಕ್ ಜುಲೈ 13 ರಿಂದ 25 ರವರೆಗೆ ಟೂರ್ನಿ ನಡೆಯಲಿದೆ ಎಂದು ಸೋಮವಾರ ವೇಳಾಪಟ್ಟಿ ಪ್ರಕಟಿಸಿತ್ತು. ಮತ್ತೊಂದೆಡೆ, ಪ್ರವಾಸಕ್ಕೆ 24 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಅನುಭವಿ ಆಟಗಾರ ಶಿಖರ್ ಧವನ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವದ ಪ್ರಮುಖ ರೇಸ್‌ನಲ್ಲಿದ್ದಾರೆ. ಜುಲೈ 13, 16 ಮತ್ತು 18 ರಂದು ಏಕದಿನ ಹಾಗೂ ಜುಲೈ 21, 23 ಹಾಗೂ 25 ಟಿ20 ಪಂದ್ಯಗಳು ನಡೆಯಲಿವೆ. ಭಾರತ ತಂಡ ಇಂಗ್ಲೆಂಡ್‌ನಲ್ಲಿ ಡಬ್ಲ್ಯುಟಿಸಿ ಫೈನಲ್ ಹಾಗೂ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಎರಡನೇ ಸ್ಥರ ತಂಡವನ್ನು ಆಯ್ಕೆ ಮಾಡಲಿದೆ.
ಗುತ್ತಿಗೆ ಇಲ್ಲದೆ ಇಂಗ್ಲೆಂಡ್ ಪ್ರವಾಸ
ಎಸ್‌ಎಲ್‌ಸಿಯ ಪರಿಷ್ಕೃತ ಕೇಂದ್ರ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿರುವ ಶ್ರೀಲಂಕಾ ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಗುತ್ತಿಗೆ ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಸಹಿ ಹಾಕದಿರಲು ತೀರ್ಮಾನಿಸಿದ್ದಾರೆ. ಜೂನ್ 18 ರಿಂದ ಜುಲೈ 4 ರವರೆಗೆ ನಡೆಯಲಿರುವ ಇಂಗ್ಲೆಂಡ್ ಪ್ರವಾಸದಲ್ಲಿ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಗುತ್ತಿಗೆ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಆಟಗಾರರ ಹಾಗೂ ಎಸ್‌ಎಲ್‌ಸಿ ನಡುವೆ ಹಲವು ಸುತ್ತಿನ ಮಾತುಕತೆ ವಿಲಗೊಂಡಿದೆ. ಗುತ್ತಿಗೆ ಒಪ್ಪಂದ ಸಹಿಹಾಕಲು ಜೂನ್ 3 ರವರೆಗೆ ಗಡುವು ನೀಡಿದ್ದರೂ ಆಟಗಾರರು ನಿರಾಕರಿಸಿದ್ದರು.