VIDEO| ಅಹಮದಬಾದಿನಲ್ಲಿ ಪಾಕಿಸ್ತಾನ ತಂಡಕ್ಕೆ ಭವ್ಯ ಸ್ವಾಗತ; ಯೋಧರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ ನೆಟ್ಟಿಗರು

Pak Team
Published on

ಅಹಮದಬಾದ್: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯು ಹಲವು ವಿಶೇಷತೆಗಳಿಂದ ಕೂಡಿದ್ದು, ಇಡೀ ವಿಶ್ವವೇ ಶನಿವಾರ ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಎದುರು ನೋಡುತ್ತಿದೆ. ಅಕ್ಟೋಬರ್​ 14ರಂದು ಅಹಮದಬಾದಿನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಇದೀಗ ಬಿಸಿಸಿಐನ ನಡೆಗೆ ಕ್ರೀಡಾಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಶನಿವಾರ ಭಾರತದ ವಿರುದ್ಧ ನಡೆಯುವ ಪಂದ್ಯಕ್ಕೆ ಪಾಕಿಸ್ತಾನ ತಂಡವು ಗುರುವಾರ ಅಹಮದಬಾದಿಗೆ ಆಗಮಿಸಿದೆ. ಆದರೆ, ಪಾಕಿಸ್ತಾನ ತಂಡಕ್ಕೆ ಅಹಮದಬಾದಿಗೆ ಆಗಮಿಸಿದ ವೇಳೆ ಭವ್ಯ ಸ್ವಾಗತ ನೀಡಿರುವುದು ಹಲವರ ಕಣ್ಣು ಕೆಂಪಗಾಗಿಸಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಅಹಮದಬಾದಿಗೆ ಬಂದಿಳಿದ ಬಳಿಕ ಪಾಕಿಸ್ತಾನದ ಆಟಗಾರರು ಉಳಿದುಕೊಳ್ಳುವ ಹೋಟೆಲ್​ನಲ್ಲಿ ಅಲ್ಲಿನ ಸಿಬ್ಬಂದಿ ಹಾಗೂ ಬಿಸಿಸಿಐ ವತಿಯಿಂದ ಭರ್ಜರಿ ಸ್ವಾಗತ ಕೋರಲಾಗಿದೆ. ಡೋಲು ಬಾರಿಸಿ ನೃತ್ಯ ಮಾಡುವ ಮೂಲಕ ಪಾಕಿಸ್ತಾನ ತಂಡಕ್ಕೆ ಸ್ವಾಗತ ಕೋರಲಾಗಿದ್ದು, ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ಧಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯವು ಬಿಸಿಸಿಐ ಹಾಗೂ ಭಾರತ ಸರ್ಕಾರಕ್ಕೆ ಸಾಕಷ್ಟು ಆದಾಯ ತಂದುಕೊಡಲಿದೆ ಎಂಬ ಕಾರಣಕ್ಕೆ ಶತ್ರು ರಾಷ್ಟ್ರದ ಆಟಗಾರರಿಗೆ ಈ ರೀತಿಯ ಭವ್ಯ ಸ್ವಾಗತ ಕೋರಿರುವುದು ಸರಿಯಲ್ಲ. ಕಳೆದ ಹಲವು ವರ್ಷಗಳಿಂದ ಭಯೋತ್ಪಾದಕರು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನ ತಂಡಕ್ಕೆ ಈ ರೀತಿಯ ಸ್ವಾಗತ ನೀಡುವ ಮೂಲಕ ಬಿಸಿಸಿಐ ಹಾಗೂ ಭಾರತ ಸರ್ಕಾರ ಹುತಾತ್ಮರಾದ ಯೋಧರಿಗೆ ಅವಮಾನ ಮಾಡಿದೆ ಎಂದು ಹಲವರು ಕಿಡಿಕಾರಿದ್ದಾರೆ.

ನಮ್ಮ ಯೋಧರ ಸಾವನ್ನು ಸಂಭ್ರಮಿಸಿದವರಿಗೆ ಏಕಿಷ್ಟು ಭವ್ಯ ಸ್ವಾಗತ ನೀಡಲಾಗಿದೆ. ಶತ್ರುರಾಷ್ಟ್ರದ ಪ್ರಧಾನಿ ಜನ್ಮದಿನಕ್ಕೆ ಹೋಗಿ ಕೇಕ್​ ತಿಂದು ಬಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಜಯ್​ ಷಾ ಅವರು ಈ ರೀತಿಯ ಕೆಲಸಗಳಿಂದ ತಮ್ಮ ತಂದೆ ಅಮಿತ್​ ಷಾ ಅವರ ಹೆಸರು ಹಾಳು ಮಾಡುವ ಬದಲು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಸುಮ್ಮನೇ ಮನೆಯಲ್ಲಿ ಕೂರುವುದು ಲೇಸು ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

ಅಕ್ಟೋಬರ್​ 14 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಲಿದ್ದು, ಉಭಯ ದೇಶಗಳ ಕ್ರಿಕೆಟ್​ ಕದನಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. 1,30,000ಕ್ಕೂ ಅಧಿಕ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣ ಹೌಸ್​ಫುಲ್​ ಆಗುವುದು ಕನ್ಫರ್ಮ್​ ಎಂದು ಕ್ರಿಕೆಟ್​ ಪಂಡಿತರು ಭವಿಷ್ಯ ನುಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net