More

    ಪಂಚರಾಜ್ಯ ಚುನಾವಣೆ| ಎಬಿಪಿ-ಸಿ ವೋಟರ್ ಸಮೀಕ್ಷೆ ಪ್ರಕಟ; ಕಾಂಗ್ರೆಸ್​ಗೆ ಬಂಪರ್

    ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನವಾಣೆ ಘೊಷಣೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, 2024ರ ಲೋಕಸಭೆ ಚುನಾವಣೆಗೆ ಇದು ಸೆಮಿಫೈನಲ್​ ಎಂದು ಪರಿಗಣಿಸಲಾಗಿದೆ.

    ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಕ್ಕೆ ನಿರ್ಣಾಯಕ ಎನ್ನಿಸಿರುವ ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಎಬಿಪಿ ಸಿ-ವೋಟರ್​ ಸಮೀಕ್ಷೆ ಹೊರಬಿದ್ದಿದ್ದು, ಐದು ರಾಜ್ಯಗಳ ಪೈಕಿ ಕಾಂಗ್ರೆಸ್​ ಮೂರರಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಮಿಜೋರಾಂನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

    ಮಿಜೋರಾಂ: 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ ಈ ಭಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಆಡಳಿತರೂಢ ಮಿಜೋರಾಂ ನ್ಯಾಷನಲ್ ಫ್ರಂಟ್ (MNF) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಕಾಂಗ್ರೆಸ್​ ರನ್ನರ್​ಅಪ್ ಆಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. MNF: 13-17, ಕಾಂಗ್ರೆಸ್: 10-14, ZPM: 9-13 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.

    ತೆಲಂಗಾಣ: ತೆಲಂಗಾಣ ರಾಜ್ಯ ರಚನೆಯಾದ ನಂತರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಟ್ರಂಪ್​ ಕಾರ್ಡ್​ ಹಿಡಿದು ಚುನಾವಣೆ ಎದುರಿಸಲು ಕೆಸಿಆರ್​ ನೇತೃತ್ವದ ಭಾರತ ರಾಷ್ಟ್ರ ಸಮಿತಿ (BRS) ಪಕ್ಷ ಸಜ್ಜಾಗಿದೆ. ಕಳೆದ ಎರಡು ಚುನಾವಣೆಗಳಲ್ಲಿ ನಿರಾಯಸವಾಗಿ ಗೆಲುವಿನ ದಡ ಸೇರಿದ ಕೆಸಿಆರ್​ ನೇತೃತ್ವದ ಪಾರ್ಟಿಗೆ ಈ ಭಾರಿ ಕಾಂಗ್ರೆಸ್​ ನೇರ ಸವಾಲೊಡ್ಡಿದೆ.

    ತೆಲಂಗಾಣದಲ್ಲೂ ಕರ್ನಾಟಕ ಮಾಡೆಲ್​ ಅನುಸರಿಸಿರುವ ಕಾಂಗ್ರೆಸ್​ ಆರು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಬಿಆರ್​ಎಸ್​ ನಾಯಕರ ನಿದ್ದೆಗೆಡಿಸಿದೆ. ಸಮೀಕ್ಷೆಯ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್​ ಹಾಗೂ ಬಿಆರ್​ಎಸ್​ ನಡುವೆ ನೇರ ಪೈಪೋಟಿ ಏರ್ಪಡಲಿದೆ ಎಂದು ಹೇಳಲಾಗಿದೆ. 119 ಸದಸ್ಯ ಬಲದ ತೆಲಂಗಣಾ ವಿಧಾನಸಭೆಯಲ್ಲಿ ಕಾಂಗ್ರೆಸ್:​ 48-60, ಬಿಆರ್​ಎಸ್:​ 43-55, ಬಿಜೆಪಿ: 5-11, ಇತರರು: 5-11 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.

    ECI five States List

    ಛತ್ತೀಸ್​ಗಢ: 90 ಸದಸ್ಯಬಲದ ಛತ್ತೀಡ್​ಗಢ ವಿಧಾನಸಭೆಯಲ್ಲಿ ಆಡಳಿತರೂಢ ಕಾಂಗ್ರೆಸ್​ ಹಾಗೂ ವಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ ಎಂದು ಹೇಳಲಾಗಿದೆ. ಮತಗಳಿಕೆಯಲ್ಲಿ ಬಿಜೆಪಿಗಿಂತ ಶೇ. 01ರಷ್ಟು ಮುಂದಿರುವ ಕಾಂಗ್ರೆಸ್​ ಈ ಭಾರಿಯ ಚುನಾವಣೆಯಲ್ಲಿ ತೀವ್ರ ಪೈಪೋಟಿ ಎದುರಿಸಲಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್​: 45-51, ಬಿಜೆಪಿ: 39-45, ಇತರರು: 0-2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ಏಕದಿನ ವಿಶ್ವಕಪ್ 2023| ಸ್ಯಾಂಟ್ನರ್ ಆಲ್​ರೌಂಡ್ ಆಟ, ನೆದರ್ಲೆಂಡ್ ವಿರುದ್ಧ ನ್ಯೂಜಿಲೆಂಡ್​ಗೆ 99ರನ್​ಗಳ ಜಯ

    ಮಧ್ಯಪ್ರದೇಶ: 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ವಿಪಕ್ಷ ಕಾಂಗ್ರೆಸ್​ ಈ ಭಾರಿಯ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆಯಲ್ಲಿ ಬಹಿರಂಗಗೊಂಡಿರುವ ಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ಶೇ.45 ರಷ್ಟು ಮತ ಪಡೆಯಬಹುದು ಎಂದು ಹೇಳಲಾಗಿದೆ.

    ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಆಡಳಿತ ವಿರೋಧಿ ಅಲೆಯನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್​ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ. ಇತ್ತ ಬಿಜೆಪಿ ಕಾಂಗ್ರೆಸ್​ ನಾಯಕರ ಒಳಜಗಳ ಹಾಗೂ ಅಭಿವೃದ್ಧಿ ಕಾರ್ಯಗಳ ಟ್ರಂಪ್​ ಕಾರ್ಡ್​ ತನ್ನ ಪಾಲಿಗೆ ವರದಾನವಾಗಲಿದೆ ಎಂದು ಭಾವಿಸಿದೆ. ಕಾಂಗ್ರೆಸ್​: 113-125, ಬಿಜೆಪಿ: 104-116, ಇತರರು: 0-4 ಗೆಲ್ಲಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

    ರಾಜಸ್ಥಾನ: 200 ಸದಸ್ಯಬಲದ ರಾಜಸ್ಥಾನದಲ್ಲಿ ಬಿಜೆಪಿ 125-137 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆಡಳಿತರೂಡ ಕಾಂಗ್ರೆಸ್​ 59-69 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಬಿಪಿ ಸಿ-ವೋಟರ್ ಸಮೀಕ್ಷೆಯಲ್ಲಿ ಹೇಳಲಾಗಿದೆ. 2018ರಲ್ಲಿ ಶೇ. 38ರಷ್ಟು ಮತ ಪಡೆದಿದ್ದ, ಬಿಜೆಪಿ ಈ ಭಾರಿ ಮತಗಳಿಕೆಯಲ್ಲಿ ಏರಿಕೆ ಕಂಡಿದ್ದು, 46% ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಹೇಳಲಾಗಿದೆ. ಶೇ. 42ರಷ್ಟು ಮತ ಪಡೆಯುವ ಮೂಲಕ ಆಡಳಿತರೂಢ ಕಾಂಗ್ರೆಸ್​ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ. ಬಿಜೆಪಿ: 127-137, ಕಾಂಗ್ರೆಸ್: 59-69, ಇತರರು: 2-6 ಸ್ಥಾನಗಳನ್ನು ಗೆಲ್ಲಬಹುದು ಎಂದು ಎಬಿಪಿ-ಸಿ ವೋಟರ್ ಎಂದು ಸಮೀಕ್ಷೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts