ಇನ್ನೇನು ತಾಳಿ ಕಟ್ಟಬೇಕು ಅಷ್ಟರೊಳಗೆ ಅವನು ಬೇಡ ಎಂದಳು ವಧು! ಆಕೆ ಕೊಟ್ಟ ಕಾರಣ ಕೇಳಿ ವರ ಕಂಗಾಲು

WhatsApp Image 2024-04-29 at 8.00.57 AM
Published on

ಉತ್ತರಪ್ರದೇಶ: 'ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ' ಎಂಬ ಹಾಡು ಮದುವೆಯ ಸಮಯದಲ್ಲಿ ವಧು-ವರ ಹಾಗೂ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಖುಷಿ ನೀಡಲಿ ಎಂದು ಕೆಲವರು ಹಾಡುತ್ತಾರೆ, ಇನ್ನೂ ಕೆಲವರು ಚಿತ್ರ ಗೀತೆಗಳನ್ನೇ ಕೇಳಿಸುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹ ಎಂಬುದು ಬಹಳ ಮಹತ್ವದ ಘಟ್ಟ, ಹೊಸ ಬದುಕಿಗೆ ಮತ್ತೊಂದು ಹೊಸ ತಿರುವು ಎಂದೇ ಹೇಳಬಹುದು. ಇಂತಹ ಘಳಿಗೆಗೆ ಅದೆಷ್ಟೋ ವರ್ಷಗಳಿಂದ ಕಾಯುವ ಕುಟುಂಬಸ್ಥರಿಗೆ ತಮ್ಮ ಮಕ್ಕಳು ಅದ್ದೂರಿಯಾಗಿ ಮದುವೆಯಾಗಿ, ಸುಖಕರ ಜೀವನ ನಡೆಸಲಿ ಎಂದು ಆಶಿಸುತ್ತಿರುತ್ತಾರೆ. ಆದ್ರೆ, ಇದೇ ಮರೆಯಲಾಗದ ಘಟನೆಯಾದರೆ ಅರಗಿಸಿಕೊಳ್ಳುವುದು ಬಲುಕಷ್ಟ. ಅಂತಹದ್ದೇ ರೀತಿಯಲ್ಲಿ ಇಲ್ಲೊಂದು ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಮದುವೆಗೆ ಹುಡುಗ-ಹುಡುಗಿಯ ಒಪ್ಪಿಗೆ ಪಡೆದು, ಕಂಕಣ ನಿಶ್ಚಯಿಸಿ, ಮದುವೆ ಆಮಂತ್ರಣವನ್ನು ಊರಿನವರಿಗೆ, ಸಂಬಂಧಿಕರಿಗೆ ಹಂಚಿ, ಆ ದಿನಕ್ಕಾಗಿ ಭಾರೀ ದಿನಗಳಿಂದ ಶ್ರಮಿಸಿ, ತಯಾರಿ ಮಾಡಿಕೊಳ್ಳುವ ವಧು-ವರನ ಕುಟುಂಬಕ್ಕೆ ದಿಢೀರ್​ ಎಂದು ಮದುವೆ ನಿಂತು ಹೋದರೆ ಎಂತಹ ಆಘಾತ ಎದುರಾಗಬಹುದು? ಇಲ್ಲಿಯೂ ಕೂಡ ಯುವತಿಯೊಬ್ಬಳು ಇದೇ ರೀತಿ ಶುಭ ಘಳಿಗೆಯಲ್ಲಿ ಎಡವಟ್ಟು ಮಾಡಿದ್ದು, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ನನಗೆ ಈ ವರ ಬೇಡವೆಂದು ಹೇಳಿ, ಸ್ಥಳದಿಂದ ಎದ್ದು ನಡೆದಿದ್ದಾಳೆ. ಇದು ವರನ ಕುಟುಂಬಸ್ಥರಿಗೆ ಭಾರೀ ಅಚ್ಚರಿ ಮೂಡಿಸಿತು.

ಉತ್ತರಪ್ರದೇಶದ ರಾಮ್​ಪುರದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಯುವತಿ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಳು. ಅಷ್ಟಕ್ಕೂ ಕಾರಣವೇನು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಆಕೆ, ವರನ ಮೈಬಣ್ಣ ಕಪ್ಪು. ನನಗೆ ಈ ಮದುವೆ ಬೇಡ ಎಂದು ಏಕಾಏಕಿ ಮಂಟಪದಿಂದ ಎದ್ದು, ತನ್ನ ಕುಟುಂಬಸ್ಥರ ಬಳಿ ಅಳಲು ತೋಡಿಕೊಂಡಿದ್ದಾಳೆ. ಇದಕ್ಕೆ ಆಕೆಯ ಪೋಷಕರು ಸಹ ಬೆಂಬಲಿಸಿ ಸಾಂತ್ವನ ಹೇಳಿದ್ದಾರೆ. ಇದರಿಂದ ಕಂಗಾಲಾದ ವರನ ಹೆತ್ತವರು, ಯುವತಿ ಮನೆಯವರಿಗೆ ಮನವರಿಕೆ ಮಾಡಿ, ಅರ್ಧಕ್ಕೆ ಕೈಬಿಡಬೇಡಿ ಎಂದು ಕೋರಿದರು ಸಹ ಕೇಳದ ಆಕೆಯ ಪೋಷಕರು, ಮದುವೆ ಮಾಡಿಕೊಡಲು ಮುಂದಾಗಲಿಲ್ಲ.

ಈ ಸಮಸ್ಯೆಗೆ ಪರಿಹಾರ ಸಿಗದ ಕಾರಣ ಈ ಪ್ರಕರಣ ಪಂಚಾಯ್ತಿ ಮಟ್ಟಕ್ಕೆ ತಲುಪಿತು. ಏನೇ ಮಾತನಾಡಿಸಿ, ಚರ್ಚಿಸಿದರು ಯುವತಿ ಹಾಗೂ ಆಕೆಯ ಕುಟುಂಬಸ್ಥರು ಮಾತ್ರ ಈ ಮದುವೆಗೆ ಒಪ್ಪಲೇ ಇಲ್ಲ. ಕಡೆಗೆ ವರನ ಕುಟುಂಬಸ್ಥರು ತಮ್ಮ ಮನೆಗೆ ದುಃಖದಿಂದಲೇ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ. ನಿಗದಿಪಡಿಸಿದಂತೆ ಏಪ್ರಿಲ್ 26ರಂದು ಈ ಮದುವೆ ನಿಶ್ಚಯವಾಗಿತ್ತು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net