VIDEO| ಒಂದೇ ಎಸೆತದಲ್ಲಿ 13 ರನ್​ ಗಳಿಸಿ ವಿಶಿಷ್ಟ ಸಾಧನೆ ಮಾಡಿದ ನ್ಯೂಜಿಲೆಂಡ್ ಬ್ಯಾಟರ್

Mitchell Santner
Published on

ಹೈದರಾಬಾದ್​: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗದಲ್ಲಿ ಸೋಮವಾರ ನೆದರ್​ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವು ಸರ್ವಾಂಗೀಣ ಪ್ರದರ್ಶನದಿಂದ 99 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್​ರೌಂಡರ್​ ಮಿಚೆಲ್​ ಸ್ಯಾಂಟ್ನರ್​ ಬ್ಯಾಟಿಂಗ್​ ವೇಳೆ ಅಸಾಧ್ಯ ಸಾಧನೆ ಒಂದನ್ನು ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇನ್ನಿಂಗ್ಸ್​ನ ಕೊನೆಯ ಓವರ್​ನಲ್ಲಿ ಬ್ಯಾಟಿಂಗ್​ ಮಾಡುವ ಕ್ರೀಸ್​ನಲ್ಲಿದ್ದ ಮಿಚೆಲ್​ ಸ್ಯಾಂಟ್ನರ್ 1 ಎಸೆತದಲ್ಲಿ 13ರನ್​ ಗಳಿಸುವ ಮೂಲಕ ವಿಶ್ವಕಪ್​ ಕ್ರಿಕೆಟ್​ನಲ್ಲಿ ಅಸಾಧ್ಯ ಸಾಧನೆ ಒಂದನ್ನು ಮಾಡಿದ್ದಾರೆ. ನೆದರ್​ಲೆಂಡ್ಸ್​ ಪರ ಇನ್ನಿಂಗ್ಸ್​ನ ಕೊನೆಯ ಓವರ್ ಎಸೆದ ಬಾಸ್​ ದಿ ಲೀಡೆ ಮೊದಲ ಬಾಲ್​ಅನ್ನು ಫುಲ್​ಟಾಸ್​ ಎಸೆಯುತ್ತಾರೆ. ಫುಲ್​ಟಾಸ್​ ಎಸೆತವನ್ನು ಸ್ಯಾಂಟ್ನರ್​ ಸಿಕ್ಸರ್​ಗೆ ಅಟ್ಟುತ್ತಾರೆ. ಆದರೆ, ಇದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ ಅಂಪೈರ್ ಫುಲ್​ಟಾಸ್​ ಎಸೆತವನ್ನು ನೋಬಾಲ್​ ಎಂದು ಘೋಷಿಸುತ್ತಾರೆ.

ಫ್ರೀಹಿಟ್​ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸ್ಯಾಂಟ್ನರ್ ಮರುಎಸೆತವನ್ನು ಬ್ಯಾಕ್​ವರ್ಡ್​ ಪಾಯಿಂಟ್​ನತ್ತ ಸಿಕ್ಸರ್​ಗೆ ಅಟ್ಟಿದ್ದರು. ಈ ಮೂಲಕ ಮಿಚೆಲ್​ ಸ್ಯಾಂಟ್ನರ್​ 1 ಎಸೆತದಲ್ಲೇ 13 ರನ್​ಗಳಿಸುವ ಮೂಲಕ ವಿಶ್ವಕಪ್​ ಕ್ರಿಕೆಟ್​ನಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ನೆದರ್​ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಆಲ್​ರೌಂಡ್​ ಪ್ರದರ್ಶನ ನೀಡಿದ ಸ್ಯಾಂಟ್ನರ್ ನ್ಯೂಜಿಲೆಂಡ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net