

ಲಖನೌ: ಯುವಜೋಡಿಯೊಂದು ಚಲಿಸುತ್ತಿರುವ ಬೈಕ್ ಮೇಲೆ ಕುಳಿತು ಅಸಭ್ಯ ವರ್ತನೆ ತೋರಿದ್ದಲ್ಲದೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪೊಲೀಸರು ಅಗತ್ಯ ಕ್ರಮಕೈಗೊಳ್ಳದೆ ಇರುವುದು ಈ ರೀತಿಯ ಅಶಿಸ್ತಿನ ವರ್ತನೆಗೆ ಕಾರಣ ಎಂದು ಹಲವರು ದೂರಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮುಂದೆ ರಸ್ತೆ ನೋಡಿಕೊಂಡು ಯುವಕ ಬೈಕ್ ಚಲಾಯಿಸುತ್ತಿದ್ದರೆ ಆತನನ್ನು ತಬ್ಬು ಹಿಂಬದಿ ಮುಖ ಮಾಡಿಕೊಂಡು ಯುವತಿ ಕುಳಿತುಕೊಂಡಿರುವುದು ಕಂಡು ಬರುತ್ತದೆ. ಈ ವಿಡಿಯೋವನ್ನು ಕಾರಿನಲ್ಲಿ ತೆರಳುತ್ತಿದ್ದವರೊಬ್ಬರು ಸೆರೆ ಹಿಡಿದಿದ್ದಾರೆ. ಹಲವರು ಇವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯೊಬ್ಬರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಇತರ ಚಟುವಟಿಕೆಗಳಲ್ಲಿ ತೊಡಗಿರುವ ವಿಡಿಯೋವನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಸ್ವೀಕರಿಸಿದ್ದೇವೆ. ವಿಡಿಯೋದಲ್ಲಿ ಪತ್ತೆಯಾಗಿರುವ ನೋಂದಣಿ ಸಂಖ್ಯೆಯ ಆಧಾರದ ಮೇಲೆ ನಾವು ವಾಹನ ಮಾಲೀಕರ ಹೆಸರು ಮತ್ತು ವಿಳಾಸವನ್ನು ಪಡೆದುಕೊಂಡಿದ್ದೇವೆ ಮತ್ತು ಮೋಟಾರು ವಾಹನ ಕಾಯ್ದೆ (MV) ಅಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹಾಪುರ್ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.