

ನವದೆಹಲಿ: ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಸಂಬಂಧ ವರ್ಷ ಕಳೆದಂತೆ ಹಳಸುತ್ತಿದ್ದು, ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಯಾಗುವುದು ಡೌಟ್ ಎಂದು ಹೇಳಲಾಗಿದೆ. ಇದರ ನಡುವೆಯೇ ನೆರೆಯ ಪಾಕಿಸ್ತಾನವು ಬಹಳ ವರ್ಷಗಳ ನಂತರ ಐಸಿಸಿ ಟೂರ್ನಿ (Icc Tourney) ಒಂದಕ್ಕೆ ಆತಿಥ್ಯ ವಹಿಸುತ್ತಿದ್ದು, ಇದು ಅಲ್ಲಿಂದ ಸ್ಥಳಾಂತರವಾಗುವ ಸಾಧ್ಯತೆ ಬಗ್ಗೆ ವರದಿಯಾಗಿದೆ. ಹಾಲಿ ಚಾಂಪಿಯನ್ಸ್ ಪಾಕಿಸ್ತಾನದ ಆತಿಥ್ಯದಲ್ಲಿ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಮಹತ್ವದ ಸುದ್ದಿ ಒಂದು ಹೊರಬಿದ್ದಿದ್ದು, ಪಾಕ್ಗೆ ಮತ್ತೊಮ್ಮೆ ಮುಖಭಂಗವಾಗುವ ಸಾಧ್ಯತೆಯಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ (Champions Trophy) ನಡೆಸಲು ಐಸಿಸಿ ಇನ್ನೂ ಅನುಮೋದನೆ ನೀಡಿಲ್ಲ ಎಂದು ವರದಿಯಾಗಿದೆ. ಈಗಾಗಲೇ ಹೇಳಿರುವಂತೆ ಟೂರ್ನಿ ಏನಾದರೂ ಪಾಕಿಸ್ತಾನದಲ್ಲಿ ನಡೆದರೆ ನಾವು ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ ಎಂದು ಭಾರತ ಕಡ್ಡಿ ಮುರಿದಂತೆ ಹೇಳಿದ್ದು, ಈ ಕಾರಣಕ್ಕೂ ಟೂರ್ನಿಯನ್ನು ಬೇರೆಡೆ ಸ್ಥಳಾಂತರಿಸಲು ಐಸಿಸಿ ಚಿಂತನೆ ನಡೆಸಿದೆ.
ಸದ್ಯ ವರದಿಯಾಗಿರುವ ಪ್ರಕಾರ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ (Champions Trophy) ಆಯೋಜಿಸಲು ಐಸಿಸಿ ಅನುಮತಿ ನೀಡದಿದ್ದರೆ ಪರ್ಯಾಯ ಸ್ಥಳಗಳಾಗಿ UAE, ಶ್ರೀಲಂಕಾ (Srilanka), ದಕ್ಷಿಣ ಆಫ್ರಿಕಾವನ್ನು (South Africa) ಆಯ್ಕೆ ಮಾಡಲಾಗಿದ್ದು, ಈ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (Pakistan Cricket Board) ಕಳುಹಿಸಲು ಐಸಿಸಿ ಸಜ್ಜಾಗಿದೆ. ಒಂದು ವೇಳೆ ಟೂರ್ನಿ ಏನಾದರೂ ಸ್ಥಳಾಂತರಗೊಂಡರೆ ಪಾಕ್ಗೆ (Pakistan) ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮುಖಭಂಗವಾಗಲಿದೆ.
ಐಸಿಸಿ (ICC) ಪಾಕಿಸ್ತಾನದಿಂದ (Pakistan) ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ಸ್ಥಳಾಂತರಿಸುವ ಪ್ರಸ್ತಾಪವನ್ನು ಮುಂದಿಟ್ಟರೆ ಪಾಕ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ (Hybrid Model) ಟೂರ್ನಿಯನ್ನು ಆಯೋಜಿಸಲು ಮುಂದಾಗಲಿದೆ. ಅದರಂತೆ ಭಾರತದ ಪಂದ್ಯಗಳಿಗೆ ಶ್ರೀಲಂಕಾ (Srilanka) ಅಥವಾ ಯುಎಇ (UAE) ಆತಿಥ್ಯವಹಿಸುವ ಸಾಧ್ಯತೆಯಿದ್ದು, ಉಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ. ಏಕೆಂದರೆ ಕಳೆದ ಬಾರಿಯ ಏಷ್ಯಾಕಪ್ (Asia Cup) ಆಯೋಜನೆಯ ಹಕ್ಕನ್ನು ಪಾಕ್ ಕ್ರಿಕೆಟ್ ಮಂಡಳಿ ಹೊಂದಿತ್ತು. ಆದರೆ ಭಾರತ ತಂಡವು ಪಾಕ್ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಅದರಂತೆ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು.
1996ರಲ್ಲಿ ನಡೆದ ಏಕದಿನ ವಿಶ್ವಕಪ್ (ODI WorldCup) ಬಳಿಕ ಪಾಕಿಸ್ತಾನದಲ್ಲಿ ಐಸಿಸಿ ನಡೆಸುವ ಯಾವುದೇ ಟೂರ್ನಿ ಆಯೋಜನೆಗೊಂಡಿಲ್ಲ. 2011ರಲ್ಲಿ ಭಾರತದ ಸಹಭಾಗಿತ್ವದಲ್ಲಿ ಏಕದಿನ ವಿಶ್ವಕಪ್ಅನ್ನು ಆಯೋಜಿಸಬೇಕಿತ್ತು. ಆದರೆ, 2009ರಲ್ಲಿ ಶ್ರೀಲಂಕಾದ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕರ ದಾಳಿಯಿಂದಾಗಿ ಟೂರ್ನಿಯಲ್ಲಿ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಆಯೋಜಿಸಲಾಯಿತು. ಇದೀಗ ಚಾಂಪಿಯನ್ಸ್ ಟ್ರೋಫಿ (Champions Trophy) ಕೂಡ ಕೈತಪ್ಪುವ ಭೀತಿಯಲ್ಲಿದ್ದು, ಕಾದು ನೋಡಬೇಕಿದೆ. 2025ರ ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ (Champions Trophy) ಶುರುವಾಗಲಿದ್ದು, ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ.