

Priyansh Arya : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಸೂಪರ್ ಸ್ಟಾರ್ ಹೊರ ಹೊಮ್ಮಿದ್ದಾರೆ. ಅವರ ಹೆಸರೇ ಪ್ರಿಯಾಂಶ್ ಆರ್ಯ. ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್, ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದರು. ಇದು ಅನ್ಕ್ಯಾಪ್ಡ್ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಶತಕವಾಗಿದೆ.
ಪಂಜಾಬ್ ಕಿಂಗ್ಸ್ ತಂಡ ಇದೀಗ ಒಂದು ಅಮೂಲ್ಯ ರತ್ನವನ್ನು ತಮ್ಮ ಬಳಿ ಹೊಂದಿದೆ. ಆದರೆ ಒಬ್ಬರ ಲಾಭವು ಇನ್ನೊಬ್ಬರ ನಷ್ಟ ಎಂಬ ಮಾತು ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸೂಕ್ತವಾಗಿದೆ. ಏಕೆಂದರೆ, ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಿಯಾಂಶ್ ಆರ್ಯ ಅವರ ಸೇವೆಗಳನ್ನು ಪಡೆಯಲು ಸಾಕಷ್ಟು ಬಿಡ್ ಮಾಡದೆ ಆರ್‌ಸಿಬಿ ಸುಮ್ಮನಾಯಿತು. ಕೊನೆಗೆ ಪಂಜಾಬ್ ಅವರನ್ನು ಖರೀದಿ ಮಾಡಿತು.
ದೆಹಲಿ ಮೂಲದ ಆಕ್ರಮಣಕಾರಿ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರು ಚೊಚ್ಚಲ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಟೂರ್ನಿಯಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ಪರ ಆಡಿದರು. ಹತ್ತು ಇನ್ನಿಂಗ್ಸ್‌ಗಳಲ್ಲಿ 608 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅದರಲ್ಲೂ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. 2023-24ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಪ್ರಿಯಾಂಶ್ ದೆಹಲಿಯ ಪ್ರಮುಖ ರನ್ ಸ್ಕೋರರ್ ಆಗಿ ಮತ್ತೊಮ್ಮೆ ಗಮನ ಸೆಳೆದರು. ಏಳು ಇನ್ನಿಂಗ್ಸ್‌ಗಳಲ್ಲಿ 31.71 ಸರಾಸರಿಯಲ್ಲಿ 222 ರನ್ ಗಳಿಸಿದರು ಮತ್ತು 166.91ರ ಸ್ಟ್ರೈಕ್ ರೇಟ್ ಹೊಂದಿದ್ದರು. ಐಪಿಎಲ್ 2024ರ ಹರಾಜಿಗೆ ಆಯ್ಕೆಯಾಗಿದ್ರೂ ಪ್ರಿಯಾಂಶ್ ಮಾರಾಟವಾಗದೆ ಉಳಿದರು.
ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ತಂಡ ಅವರನ್ನು ಖರೀದಿಸಲು ಆಸಕ್ತಿ ಹೊಂದಿದ್ದವು. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಬಿಡ್ಡಿಂಗ್ ಪ್ರಾರಂಭಿಸಿದಾಗ ಮೊದಲು ಡೆಲ್ಲಿ ಬಿಡ್ ಮಾಡಿತು. ಈ ವೇಳೆ ಪಂಜಾಬ್ ಎಂಟ್ರಿ ಕೊಟ್ಟು ಇದ್ದಕ್ಕಿದ್ದಂತೆ 1 ಕೋಟಿ ಬಿಡ್ ಮಾಡಿದಾಗ, ಡೆಲ್ಲಿ ಹರಾಜಿನಿಂದ ಹಿಂದೆ ಸರಿಯಿತು. ಪ್ರಿಯಾಂಶ್ ಆಟವನ್ನು ಗಮನಿಸಿದ್ದ RCB ಕೂಡ ಹರಾಜಿಗೆ ಇಳಿಯಿತು. ಇದರ ನಡುವೆ ತೀವ್ರ ಪೈಪೋಟಿ ನಡೆದು, ಪ್ರಿಯಾಂಶ್ ಬೆಲೆ 3.80 ರೂ.ಗೆ ಏರಿತು. ಈ ವೇಳೆ ಆರ್‌ಸಿಬಿ ಹರಾಜಿನಿಂದ ಹಿಂದೆ ಸರಿಯಿತು. ಅಂತಿಮವಾಗಿ ಪಂಜಾಬ್, ಪ್ರಿಯಾಂಶ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿತು.
ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರನ್ನು ಬೆಂಬಲಿಸಲು ಆರ್‌ಸಿಬಿಗೆ ಖಂಡಿತವಾಗಿಯೂ ಬಲಿಷ್ಠ ಮತ್ತು ಆಕ್ರಮಣಕಾರಿ ಭಾರತೀಯ ಬ್ಯಾಟ್ಸ್‌ಮನ್ ಅಗತ್ಯವಿತ್ತು. ಆದರೆ, ಆರ್‌ಸಿಬಿ ಅದನ್ನು ತಪ್ಪಿಸಿಕೊಂಡಿತು. ಇದೀಗ ಪಿಬಿಕೆಎಸ್ ಅದರ ಲಾಭ ಪಡೆದುಕೊಂಡಿದೆ. (ಏಜೆನ್ಸೀಸ್)