ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಅಮೆರಿಕದಿಂದ ಗಡಿಪಾರು: ಭಾರತಕ್ಕೆ ದೊಡ್ಡ ಗೆಲುವು! Tahawwur Rana

Tahawwur Rana
Published on

Tahawwur Rana : ವಾಣಿಜ್ಯ ನಗರಿ ಮುಂಬೈ ಮೇಲೆ 2008ರ ನವೆಂಬರ್​ 26ರಂದು ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಅಮೆರಿಕ ಗಡಿಪಾರು ಮಾಡಿದೆ. ಈಗಾಗಲೇ ರಾಣಾನನ್ನು ಭಾರತಕ್ಕೆ ಕರೆತರಲಾಗುತ್ತಿದ್ದು, ನಾಳೆ (ಏಪ್ರಿಲ್​ 09) ಬೆಳಗ್ಗೆ ಆಗಮಿಸುವ ನಿರೀಕ್ಷೆ ಇದೆ. ಗುಪ್ತಚರ ಮತ್ತು ತನಿಖಾ ಅಧಿಕಾರಿಗಳ ವಿಶೇಷ ತಂಡ ರಾಣಾನನ್ನು ಕರೆತರಲಿದೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.

ವಿಶೇಷ ವಿಮಾನವು ರಾಣಾನನ್ನು ಹೊತ್ತು ತರುತ್ತಿದ್ದು, ನವದೆಹಲಿಯನ್ನು ತಲುಪುವ ಮೊದಲು ಅಜ್ಞಾತ ಸ್ಥಳದಲ್ಲಿ ಇಳಿಯಲಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ನ್ಯಾಯಾಲಯದ ಶಿಫಾರಸುಗಳಿಗೆ ಅನುಗುಣವಾಗಿ, ದೆಹಲಿ ಮತ್ತು ಮುಂಬೈನ ಎರಡು ಜೈಲುಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ರಾಣಾ ಬಂದ ನಂತರ, ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದ ಮುಂದೆ ಕಸ್ಟಡಿಗಾಗಿ ಹಾಜರುಪಡಿಸಲಿದೆ ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ.

ಈ ಹಸ್ತಾಂತರ ಕಾರ್ಯಾಚರಣೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಎನ್‌ಐಎ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರು ಈ ತಹವ್ವೂರ್ ರಾಣಾ?

ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾಗಿರುವ ರಾಣಾ, ಮುಂಬೈ ದಾಳಿಯ ಪ್ರಮುಖ ಸಂಚುಕೋರ “ದೌದ್ ಗಿಲಾನಿ” ಎಂದೂ ಕರೆಯಲ್ಪಡುವ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈ ದಾಳಿಯನ್ನು ನಡೆಸುವಲ್ಲಿ ಭಯೋತ್ಪಾದಕ ಗುಂಪು ಲಷ್ಕರ್-ಇ-ತೈಬಾ (LeT) ಗೆ ಬೆಂಬಲ ನೀಡುವಲ್ಲಿ ಹೆಡ್ಲಿ ಮತ್ತು ಪಾಕಿಸ್ತಾನದಲ್ಲಿರುವ ಇತರರಿಗೆ ಸಹಾಯ ಮಾಡಿದ ಆರೋಪ ರಾಣಾ ಮೇಲಿದೆ.

ರಾಣಾ, 2008, ನವೆಂಬರ್ 11 ಮತ್ತು 21ರ ನಡುವೆ ದುಬೈ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದ. ಪೊವೈನಲ್ಲಿರುವ ಹೋಟೆಲ್ ರೆನೈಸಾನ್ಸ್‌ನಲ್ಲಿ ತಂಗಿದ್ದಾಗ, ದಾಳಿಯ ಲಾಜಿಸ್ಟಿಕ್ಸ್ ಸಿದ್ಧತೆಗಳನ್ನು ಆತ ಪರಿಶೀಲಿಸಿದ್ದಾನೆಂದು ನಂಬಲಾಗಿದೆ. ಇದಾದ ಕೇವಲ ಐದು ದಿನಗಳ ನಂತರ, ನವೆಂಬರ್ 26 ರಂದು ಸಂಘಟಿತ ದಾಳಿಗಳು ನಡೆದವು. ಇದರ ಪರಿಣಾಮವಾಗಿ 170ಕ್ಕೂ ಹೆಚ್ಚು ಜನರು ಮೃತಪಟ್ಟರು. ಇಲ್ಲಿಯವರೆಗೆ, ಈ ಮಾರಕ ದಾಳಿಗೆ ಶಿಕ್ಷೆಗೊಳಗಾದ ಏಕೈಕ ಎಲ್‌ಇಟಿ ಭಯೋತ್ಪಾದಕನೆಂದರೆ ಅದು ಅಜ್ಮಲ್ ಕಸಬ್. ದಾಳಿಯ ಸಮಯದಲ್ಲಿ ಅಧಿಕಾರಿಗಳು ಆತನನ್ನು ಜೀವಂತವಾಗಿ ಸೆರೆಹಿಡಿದರು.

ಭಾರತವು 2020ರ ಜೂನ್​ ತಿಂಗಳಲ್ಲಿ ರಾಣಾ ಅವರ ತಾತ್ಕಾಲಿಕ ಬಂಧನಕ್ಕೆ ಔಪಚಾರಿಕವಾಗಿ ವಿನಂತಿಸಿತು. ಅಲ್ಲದೆ, ಹಸ್ತಾಂತರಕ್ಕಾಗಿ ಕಾನೂನು ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ, ರಾಣಾ ಹಸ್ತಾಂತರವನ್ನು ದೃಢಪಡಿಸಿದರು ಮತ್ತು ರಾಣಾ ಭಾರತಕ್ಕೆ ಹೋಗಿ ನ್ಯಾಯವನ್ನು ಎದುರಿಸಲಿದ್ದಾನೆ ಎಂದು ಹೇಳಿದರು.

64 ವರ್ಷದ ರಾಣಾ, ಈವರೆಗೆ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದ. ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡುವುದನ್ನು ತಡೆಯಬೇಕೆಂದು ಕೋರಿ ಕಳೆದ ಫೆಬ್ರವರಿಯಲ್ಲಿ ಒಂಬತ್ತನೇ ಸರ್ಕ್ಯೂಟ್‌ನ ಸರ್ಕ್ಯೂಟ್ ನ್ಯಾಯಾಧೀಶರಿಗೆ ರಾಣಾ ತುರ್ತು ಅರ್ಜಿಯನ್ನ ಸಲ್ಲಿಸಿದ್ದ. ಆದರೆ, ಕಳೆದ ತಿಂಗಳು ಅದನ್ನು ನಿರಾಕರಿಸಲಾಯಿತು. ಇದಾದ ನಂತರ, ರಾಣಾ ತನ್ನ ತುರ್ತು ಅರ್ಜಿಯನ್ನು ಅಪ್​ಡೇಟ್​ ಮಾಡಿ, ಅದನ್ನು ಅಮೆರಿಕ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಅವರಿಗೆ ನಿರ್ದೇಶಿಸುವಂತೆ ಕೋರಿದ್ದ. ಆ ಅರ್ಜಿಯ ವಿಚಾರಣೆ ಏಪ್ರಿಲ್ 4ರಂದು ನಡೆಯಿತು. ಅಂತಿಮವಾಗಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು. ಇದೀಗ ಅಮೆರಿಕ ಆತನನ್ನು ಗಡಿಪಾರು ಮಾಡಿದ್ದು, ಭಾರತಕ್ಕೆ ಕರೆತರಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net