150 ಕೋಟಿ ರೂ. ಮೌಲ್ಯದ ಆಭರಣ, 17 ಕೋಟಿಯ ಸೀರೆ...ಇದು ಭಾರತದ ಅತ್ಯಂತ ದುಬಾರಿ ಮದುವೆ! Most expensive wedding

Most expensive wedding
Published on

Most expensive wedding : ಮದುವೆಗಳನ್ನು ಹೇಗೆಲ್ಲ ವಿಭಿನ್ನವಾಗಿ ಮಾಡಬಹುದು ಅಂತ ಇಂದು ಅನೇಕ ಜನರು ಯೋಚಿಸುತ್ತಾರೆ. ಕಳೆದ ವರ್ಷ ಜುಲೈನಲ್ಲಿ ನಡೆದ ಅನಂತ್ ಅಂಬಾನಿ ಅವರ ವಿವಾಹವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇದು ಭಾರತ ಕಂಡ ಅತ್ಯಂತ ಅದ್ದೂರಿ ವಿವಾಹಗಳಲ್ಲಿ ಒಂದಾಗಿತ್ತು. ಆದರೆ 2016ರಲ್ಲೇ ಭಾರತದಲ್ಲಿ ಇದೇ ರೀತಿಯ ವಿವಾಹ ನಡೆದಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು, 2016ರ ನವೆಂಬರ್‌ನಲ್ಲಿ ಭಾರತ ಆ ಒಂದು ಭವ್ಯ ವಿವಾಹ ಸಂಭ್ರಮಕ್ಕೆ ಸಾಕ್ಷಿಯಾಯಿತು. ಆದರೆ, ಆ ದಂಪತಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾಗಲಿ ಅಥವಾ ಶ್ರೀಮಂತ ಉದ್ಯಮಿಗಳಾಗಲಿ ಆಗಿರಲಿಲ್ಲ.

ಅದು ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ರೆಡ್ಡಿ ಅವರ ವಿವಾಹವಾಗಿತ್ತು. ವರ ರಾಜೀವ್ ರೆಡ್ಡಿ, ಹೈದರಾಬಾದ್ ಮೂಲದ ಕೈಗಾರಿಕೋದ್ಯಮಿ ವಿಕ್ರಮ್ ದೇವಿ ರೆಡ್ಡಿ ಅವರ ಪುತ್ರ. ಇದು ಕೋಟ್ಯಂತರ ರೂಪಾಯಿ ವೆಚ್ಚದ ಅದ್ಧೂರಿ ಮದುವೆ ಆಚರಣೆಯಾಗಿತ್ತು. 2016, ನವೆಂಬರ್ 16 ರಂದು ನಡೆದ ಈ ವಿವಾಹವು ಐದು ದಿನಗಳ ಕಾಲ ನಡೆಯಿತು.

ಈ ಅದ್ಧೂರಿ ಮದುವೆ ಸಮಾರಂಭಕ್ಕೆ ಸುಮಾರು 50,000 ಅತಿಥಿಗಳು ಹಾಜರಾಗಿದ್ದರು ಎಂದು ಅಂದಾಜಿಸಲಾಗಿದೆ. ಸಮಾರಂಭದ ಪ್ರಮುಖ ಆಕರ್ಷಣೆ ಅಂದರೆ, ಬ್ರಹ್ಮಿಣಿಯ ಉಡುಗೆ. ವಧು ಕೆಂಪು ಕಾಂಚೀವರಂ ಸೀರೆಯನ್ನು ಧರಿಸಿದ್ದರು. ಚಿನ್ನದ ದಾರಗಳಿಂದ ಕಸೂತಿ ಮಾಡಿದ ಸೀರೆಯ ಬೆಲೆ ಸುಮಾರು 17 ಕೋಟಿ ರೂಪಾಯಿ.

ವಧು ವಜ್ರದ ಚೋಕರ್ ಮತ್ತು ಇತರ ಚಿನ್ನದ ಆಭರಣಗಳು ಸೇರಿದಂತೆ 150 ಕೋಟಿ ರೂ. ಮೌಲ್ಯದ ಆಭರಣಗಳನ್ನು ಧರಿಸಿದ್ದರು. ಕೇವಲ ಮದುವೆಯ ಮೇಕಪ್‌ಗೆ 30 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚವಾಗಿದೆ ಎಂದು ವರದಿಯಾಗಿದೆ. ಮೇಕಪ್ ಮಾಡಲು 50 ಮೇಕಪ್ ಕಲಾವಿದರು ಬಂದಿದ್ದರು. ಈ ಮದುವೆಗೆ ಸುಮಾರು 500 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.

ಮದುವೆಗೆ ಬರುವ ಅತಿಥಿಗಳಿಗಾಗಿ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿರುವ ಪಂಚತಾರಾ ಮತ್ತು ತ್ರಿತಾರಾ ಹೋಟೆಲ್‌ಗಳಲ್ಲಿ 1500 ಕೊಠಡಿಗಳನ್ನು ಕಾಯ್ದಿರಿಸಿದ್ದರು. ಅತಿಥಿಗಳಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸಲು 2000 ಕ್ಯಾಬ್‌ಗಳು ಮತ್ತು 15 ಹೆಲಿಕಾಪ್ಟರ್‌ಗಳನ್ನು ನೇಮಿಸಲಾಗಿತ್ತು. ವಿವಾಹ ಆಮಂತ್ರಣ ಪತ್ರಿಕೆಗಳನ್ನು ಎಲ್‌ಸಿಡಿ ಪರದೆಗಳೊಂದಿಗೆ ಮಾಡಲಾಗಿತ್ತು. ಹೀಗಾಗಿ ಇದು ಭಾರತದ ಅತ್ಯಂತ ದುಬಾರಿ ಮದುವೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net