ನಿನ್ನೆ 2 ಐಪಿಎಲ್​ ಪಂದ್ಯಗಳು ನಡೆದಿದ್ದೇಕೆ? ಇದೇ ಮೊದಲ ಬಾರಿ! ಇದಕ್ಕೆ ಕಾರಣವೇನು ಗೊತ್ತಾ? IPL 2025

IPL 2025
Published on

IPL 2025 : ಸಾಮಾನ್ಯವಾಗಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವಾರಾಂತ್ಯದಲ್ಲಿ ಅಂದ್ರೆ ಶನಿವಾರ ಮತ್ತು ಭಾನುವಾರ ಮಾತ್ರ ಎರಡು ಪಂದ್ಯಗಳು ಇರುತ್ತವೆ. ಒಂದು ಪಂದ್ಯ ಮಧ್ಯಾಹ್ನ 3.30ಕ್ಕೆ ಮತ್ತು ಇನ್ನೊಂದು ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಡಬಲ್ ಹೆಡರ್ ಪಂದ್ಯಗಳ ದಿನದಂದು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತದೆ. ಇನ್ನು ಐಪಿಎಲ್‌ನಲ್ಲಿ ವಾರದ ಆರಂಭದಲ್ಲಿ ಎರಡು ಪಂದ್ಯಗಳು ನಡೆದಿಲ್ಲ. ಆದರೆ, ಪ್ರಸಕ್ತ ಸೀಸನ್​ನಲ್ಲಿ ಮಂಗಳವಾರ (ಏಪ್ರಿಲ್ 8) ಮೊದಲ ಬಾರಿಗೆ ಎರಡು ಪಂದ್ಯಗಳು ನಡೆದಿವೆ. ಇದಕ್ಕೆ ಒಂದು ಕಾರಣವೂ ಇದೆ.

ಐಪಿಎಲ್ 2025ರ ವೇಳಾಪಟ್ಟಿಯ ಪ್ರಕಾರ, ನಿನ್ನೆಯು ಕೂಡ ಒಂದೇ ಒಂದು ಪಂದ್ಯವಿತ್ತು. ಚಂಡೀಗಢದಲ್ಲಿ ನಿಗದಿಯಾಗಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಿತು ಮತ್ತು ಅದರಲ್ಲಿ ಪಂಜಾಬ್​ ಗೆಲುವು ಸಹ ಸಾಧಿಸಿದೆ. ಆದರೆ, ಏಪ್ರಿಲ್ 6 ರಂದು ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ನಡೆಯಬೇಕಿದ್ದ ಪಂದ್ಯ ನಿನ್ನೆ ಮಧ್ಯಾಹ್ನ ನಡೆದಿದೆ.

ಏಪ್ರಿಲ್ 6ರಂದು ಶ್ರೀ ರಾಮನವಮಿ ಆಚರಣೆ ಇದಿದ್ದರಿಂದ ಮೆರವಣಿಗೆ ಮತ್ತು ಪಂದ್ಯಕ್ಕೆ ಸಾಕಷ್ಟು ಭದ್ರತೆ ಒದಗಿಸಲು ಆಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಪೊಲೀಸರು ಸಿಎಬಿಗೆ ಪತ್ರ ಬರೆದಿದ್ದರು. ಪಂದ್ಯದ ದಿನಾಂಕವನ್ನು ಬದಲಾಯಿಸುವಂತೆ ಅವರು ವಿನಂತಿಸಿದ್ದರು. ಇದರೊಂದಿಗೆ, ಬಿಸಿಸಿಐ ಐಪಿಎಲ್ 2025ರ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿತು. ಏಪ್ರಿಲ್ 6 ರಂದು ನಡೆಯಬೇಕಿದ್ದ ಪಂದ್ಯ ನಿನ್ನೆ ನಡೆದಿದೆ.

ಪಂಜಾಬ್​​ ಗೆಲುವು

ಪಂದ್ಯದ ವಿಚಾರಕ್ಕೆ ಬರುವುದಾದರೆ, ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಲಖನೌಗೆ ಮಿಚೆಲ್ ಮಾರ್ಷ್ ಹಾಗೂ ಏಡೆನ್ ಮಾರ್ಕ್ರಮ್ (47) ಬಿರುಸಿನ ಆರಂಭ ಒದಗಿಸಿದರು. ನಂತರ ಪೂರನ್ ಸಿಕ್ಸರ್‌ಗಳ ಅಬ್ಬರದ ಬಲದಿಂದ ಎಲ್‌ಎಸ್‌ಜಿ 3 ವಿಕೆಟ್‌ಗೆ 238 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಐಪಿಎಲ್‌ನಲ್ಲಿ ಲಖನೌ ತಂಡದ 2ನೇ ಗರಿಷ್ಠ ಮೊತ್ತ ಎನಿಸಿದೆ.

ಪ್ರತಿಯಾಗಿ ಚೇಸಿಂಗ್‌ಗೆ ಇಳಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ (61 ರನ್, 35 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (45 ರನ್, 29 ಎಸೆತ, 6 ಬೌಂಡರಿ, 1 ಸಿಕ್ಸರ್) ದಿಟ್ಟ ಪ್ರತಿರೋಧದಿಂದ 13 ಓವರ್‌ಗಳಲ್ಲಿ 3 ವಿಕೆಟ್‌ಗೆ 162 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ನಂತರ ದಿಢೀರ್ ಕುಸಿತ ಕಂಡ ಕೆಕೆಆರ್ ಅಂತಿಮವಾಗಿ 7 ವಿಕೆಟ್‌ಗೆ 234 ರನ್‌ಗಳಿಸಿ ವೀರೋಚಿತ ಸೋಲು ಕಂಡಿತು. ಕೊನೆಯಲ್ಲಿ ರಿಂಕು ಸಿಂಗ್ (38* ರನ್, 15 ಎಸೆತ, 6 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ರವಿ ಬಿಷ್ಟೋಯಿ ಎಸೆದ ಕೊನೇ ಓವರ್‌ನಲ್ಲಿ 24 ರನ್ ಬೇಕಿದ್ದಾಗ ಸ್ಟ್ರೈಕ್‌ನಲ್ಲಿದ್ದ ಹರ್ಷಿತ್ ರಾಣಾ ಮೊದಲ ಎಸೆತದಲ್ಲಿ ಬೌಂಡರಿ ಗಳಿಸಿದರೆ, ನಂತರದ 2 ಎಸೆತಗಳಲ್ಲಿ 1 ರನ್ ಕಸಿದರು. ಅಂತಿಮ 3 ಎಸೆತಗಳಲ್ಲಿ ರಿಂಕು 2 ಬೌಂಡರಿ, ಸಿಕ್ಸರ್ ಸಿಡಿಸಿದರೂ ಜಯ ಕೈಗೆಟುಕಲಿಲ್ಲ.

ಸಿಎಸ್​ಕೆಗೆ ಮತ್ತೆ ಸೋಲು

ಚಂಡೀಗಢ ಕ್ರೀಡಾಂಗಣದಲ್ಲಿ ನಡೆದ ಸಿಎಸ್​ಕೆ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್​, 20 ಓವರ್​ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 219 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆ ಉತ್ತಮ ಆರಂಭದ ಜತೆಗೆ ಅತ್ಯುತ್ತಮ ಇನ್ನಿಂಗ್ಸ್ ನೀಡಿದರೂ ಗೆಲುವನ್ನು ದಕ್ಕಿಸಿಕೊಳ್ಳುವಲ್ಲಿ ಮತ್ತೊಮ್ಮೆ ಎಡವಿತು. ರಚಿನ್ ರವೀಂದ್ರ ಮತ್ತು ಡಿವಾನ್​ ಕಾನ್ವೆ ಉತ್ತಮ ಆರಂಭ ನೀಡುವ ಮೂಲಕ ಪವರ್​ಪ್ಲೇನಲ್ಲಿ ಹೆಚ್ಚುವರಿ ರನ್​ ಕಲೆಹಾಕಿದರು. ಆದ್ರೆ, ಹೆಚ್ಚು ಹೊತ್ತು ಕ್ರೀಸ್​ಗೆ ಅಂಟದ ರಚಿನ್, ವಿಕೆಟ್​ ಕಳೆದುಕೊಂಡರು. ರುತುರಾಜ್​ ಗಾಯಕ್ವಾಡ್​, ಶಿವಂ ದುಬೆ ನಂತರ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, 12 ಎಸೆತಗಳಲ್ಲಿ 27 ರನ್ ಸಿಡಿಸುವ ಮೂಲಕ ಗೆಲುವಿನ ಭರವಸೆ ನೀಡಿದರು. ಆದರೆ, ಕೊನೆ ಕ್ಷಣಗಳಲ್ಲಿ ಚಹಲ್​ಗೆ ಕ್ಯಾಚ್ ನೀಡುವ ಮೂಲಕ ಸೋಲು ಖಚಿತ ಎಂಬುದನ್ನು ಹೇಳಿ ಹೋದರು. ಇದು ಸಿಎಸ್​ಕೆ ಅಭಿಮಾನಿ ಬಳಗಕ್ಕೆ ಭಾರೀ ನಿರಾಶೆ ಮೂಡಿಸಿತು. ಸತತವಾಗಿ ನಾಲ್ಕು ಪಂದ್ಯಗಳಲ್ಲಿ ಸೋಲುಂಡ ಚೆನ್ನೈ ಪಡೆಗೆ ಗೆಲುವಿನ ಹಪಾಹಪಿ ಶುರುವಾಗಿದೆ. ಆರಂಭದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿಯೂ ಭಾರೀ ಮುಖಭಂಗವನ್ನು ಅನುಭವಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net