

ಕೋಲ್ಕತ: ಎಡಗೈ ಬ್ಯಾಟರ್ ನಿಕೋಲಸ್ ಪೂರನ್ (87*ರನ್, 36 ಎಸೆತ, 7 ಬೌಂಡರಿ, 8 ಸಿಕ್ಸರ್) ಹಾಗೂ ಆರಂಭಿಕ ಮಿಚೆಲ್ ಮಾರ್ಷ್ (81 ರನ್, 48 ಎಸೆತ, 6 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ತಂಡವನ್ನು 4 ರನ್‌ಗಳಿಂದ ಮಣಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಲಖನೌಗೆ ಮಿಚೆಲ್ ಮಾರ್ಷ್ ಹಾಗೂ ಏಡೆನ್ ಮಾರ್ಕ್ರಮ್ (47) ಬಿರುಸಿನ ಆರಂಭ ಒದಗಿಸಿದರು. ನಂತರ ಪೂರನ್ ಸಿಕ್ಸರ್‌ಗಳ ಅಬ್ಬರದ ಬಲದಿಂದ ಎಲ್‌ಎಸ್‌ಜಿ 3 ವಿಕೆಟ್‌ಗೆ 238 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಐಪಿಎಲ್‌ನಲ್ಲಿ ಲಖನೌ ತಂಡದ 2ನೇ ಗರಿಷ್ಠ ಮೊತ್ತ ಎನಿಸಿದೆ.
ಪ್ರತಿಯಾಗಿ ಚೇಸಿಂಗ್‌ಗೆ ಇಳಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ (61 ರನ್, 35 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (45 ರನ್, 29 ಎಸೆತ, 6 ಬೌಂಡರಿ, 1 ಸಿಕ್ಸರ್) ದಿಟ್ಟ ಪ್ರತಿರೋಧದಿಂದ 13 ಓವರ್‌ಗಳಲ್ಲಿ 3 ವಿಕೆಟ್‌ಗೆ 162 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ನಂತರ ದಿಢೀರ್ ಕುಸಿತ ಕಂಡ ಕೆಕೆಆರ್ ಅಂತಿಮವಾಗಿ 7 ವಿಕೆಟ್‌ಗೆ 234 ರನ್‌ಗಳಿಸಿ ವೀರೋಚಿತ ಸೋಲು ಕಂಡಿತು. ಕೊನೆಯಲ್ಲಿ ರಿಂಕು ಸಿಂಗ್ (38* ರನ್, 15 ಎಸೆತ, 6 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ರವಿ ಬಿಷ್ಟೋಯಿ ಎಸೆದ ಕೊನೇ ಓವರ್‌ನಲ್ಲಿ 24 ರನ್ ಬೇಕಿದ್ದಾಗ ಸ್ಟ್ರೈಕ್‌ನಲ್ಲಿದ್ದ ಹರ್ಷಿತ್ ರಾಣಾ ಮೊದಲ ಎಸೆತದಲ್ಲಿ ಬೌಂಡರಿ ಗಳಿಸಿದರೆ, ನಂತರದ 2 ಎಸೆತಗಳಲ್ಲಿ 1 ರನ್ ಕಸಿದರು. ಅಂತಿಮ 3 ಎಸೆತಗಳಲ್ಲಿ ರಿಂಕು 2 ಬೌಂಡರಿ, ಸಿಕ್ಸರ್ ಸಿಡಿಸಿದರೂ ಜಯ ಕೈಗೆಟುಕಲಿಲ್ಲ.
ಮಾರ್ಷ್-ಪೂರನ್ ಸಿಕ್ಸರ್‌ಮಳೆ
ಲಖನೌಗೆ ಮಿಚೆಲ್ ಮಾರ್ಷ್ ಹಾಗೂ ಮಾರ್ಕ್ರಮ್ ಬಿರುಸಿನ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 99 ರನ್‌ಗಳ ಉತ್ತಮ ಆಡಿಪಾಯ ಹಾಕಿಕೊಟ್ಟರು. ನಂತರ ಮಾರ್ಷ್ ಜತೆಯಾದ ಪೂರನ್ ರನ್‌ಗಳಿಕೆ ಚುರುಕು ನೀಡಿದರು. ಕೆಕೆಆರ್ ಬೌಲರ್‌ಗಳ ಬೆಂಡೆತ್ತಿದ್ದ ಈ ಜೋಡಿ 30 ಎಸೆತಗಳಲ್ಲಿ 71 ಕಸಿಯಿತು. ಮಾರ್ಷ್ 36 ಎಸೆತಗಳಲ್ಲಿ ಹಾಲಿ ಆವೃತ್ತಿಯಲ್ಲಿ 4ನೇ ಅರ್ಧಶತಕ ಸಿಡಿಸಿದರು. ಇವರಿಗೆ ಸಾಥ್ ನೀಡಿದ ಪೂರನ್ 21 ಎಸೆತಗಳಲ್ಲಿ ಅರ್ಧಶತಕಗಳಿಸಿದರು. ಮಾರ್ಷ್ ನಿರ್ಗಮನದ ಬಳಿಕ ಸ್ಲಾಗ್ ಓವರ್‌ಗಳಲ್ಲಿ ಏಕಾಂಗಿ ಅಬ್ಬರಿಸಿದ ಪೂರನ್ ರನ್‌ಗತಿ ಏರಿಸಿದರು. 3ನೇ ವಿಕೆಟ್‌ಗೆ ಪೂರನ್ ಮತ್ತು ಅಬ್ದುಲ್ ಸಮದ್ (6) 18 ಎಸೆತಗಳಲ್ಲಿ 51 ರನ್ ಕಸಿದರೆ, ಇದರಲ್ಲಿ ಪೂರನ್ ಒಬ್ಬರೇ 44 ರನ್ ಚಚ್ಚಿದರು.