ಇಲ್ಲಿ ಸತ್ತ ಹುಡುಗಿಯರನ್ನೇ ಮದ್ವೆಯಾಗ್ತಾರೆ ಹುಡುಗರು: ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Strange Facts

Strange Facts
Published on

Strange Facts : ಮನುಷ್ಯನ ಕಲ್ಪನೆಯನ್ನೂ ಮೀರಿ ಈ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅದರಲ್ಲೂ ಕೆಲವು ದೇಶಗಳ ಪದ್ಧತಿ ತುಂಬಾ ವಿಚಿತ್ರವಾಗಿರುತ್ತದೆ. ಅದಕ್ಕೆ ತಾಜಾ ಉದಾಹರಣೆ ಚೀನಾದ ಈ ವಿಚಿತ್ರ ಪದ್ಧತಿ.

ಮದುವೆ ಎಂದರೆ ಇಬ್ಬರು ವ್ಯಕ್ತಿಗಳು ಮತ್ತು ಅವರ ಕುಟುಂಬಗಳು ಒಟ್ಟಾಗಿ ಸಂಭ್ರಮಿಸುವ ಕ್ಷಣ. ಅನೇಕ ದೇಶಗಳಲ್ಲಿ, ವಿವಾಹ ಸಮಾರಂಭಗಳು ಮತ್ತು ಅದಕ್ಕೆ ಸಂಬಂಧಿಸಿದ ಪದ್ಧತಿಗಳು ವಿಭಿನ್ನವಾಗಿವೆ. ಆದಾಗ್ಯೂ, ಇವೆಲ್ಲವುಗಳಿಗಿಂತ ಭಿನ್ನವಾದ ವಿವಾಹ ಸಮಾರಂಭವನ್ನು ಚೀನಾದಲ್ಲಿ ದಶಕಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಇದನ್ನು ಪ್ರೇತ ವಿವಾಹ ಎಂದು ಕರೆಯಲಾಗುತ್ತದೆ. ಹೆಸರೇ ಸೂಚಿಸುವಂತೆ, ಈ ಮದುವೆಯಲ್ಲಿ, ಮೃತದೇಹವು ವಧು ಅಥವಾ ವರನ ಸ್ಥಾನವನ್ನು ಪಡೆಯುತ್ತದೆ. ಈ ಪ್ರೇತ ವಿವಾಹದ ಕಂಪ್ಲೀಟ್​ ಮಾಹಿತಿಯನ್ನು ನಾವೀಗ ತಿಳಿಯೋಣ.

ಪ್ರೇತ ವಿವಾಹ ಎಂದರೇನು?

ಇದು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಚೀನಾದಲ್ಲಿ ಪ್ರಾರಂಭವಾದ ಪದ್ಧತಿ. ಈ ಪ್ರಾಚೀನ ಚೀನೀ ಪದ್ಧತಿಯ ಪ್ರಕಾರ, ಮೃತ ವ್ಯಕ್ತಿಯು ಇನ್ನೊಬ್ಬ ಮೃತ ವ್ಯಕ್ತಿಯನ್ನು ಅಥವಾ ಅಪರೂಪದ ಸಂದರ್ಭಗಳಲ್ಲಿ ಜೀವಂತ ವ್ಯಕ್ತಿಯನ್ನು ಮದುವೆಯಾಗುತ್ತಾನೆ. ಸಾವಿನ ನಂತರ ಆತ್ಮವು ಏಕಾಂಗಿ ಜೀವನವನ್ನು ನಡೆಸುತ್ತದೆ ಎಂಬ ಸಂಬಂಧಿಕರ ಭಾವನೆಯೇ ಇಂತಹ ಪದ್ಧತಿಯನ್ನು ಪ್ರಾರಂಭಿಸಲು ಕಾರಣ. ಸತ್ತವರಿಗೆ ಸಂಗಾತಿಯನ್ನು ಹುಡುಕುವುದಕ್ಕಾಗಿ ಇದನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲ, ಆಧ್ಯಾತ್ಮಿಕ ಜಗತ್ತು ಮತ್ತು ಮಾನವ ಪ್ರಪಂಚದ ನಡುವೆ ಏಕತೆಯನ್ನು ಕಾಪಾಡಿಕೊಳ್ಳಲು ಇಂತಹ ಪ್ರೇತ ವಿವಾಹಗಳನ್ನು ಮಾಡುತ್ತಾರೆ.

ಅವಿವಾಹಿತ ಪುರುಷನ ಸಮಾಧಿ ಅವಿವಾಹಿತ ಮಹಿಳೆಯ ಸಮಾಧಿಯ ಬಳಿ ಇದ್ದರೆ, ಆ ಪುರುಷನ ಆತ್ಮ ಅವಿವಾಹಿತವಾಗಿಯೇ ಉಳಿಯುತ್ತದೆ ಎಂದು ನಂಬಲಾಗಿದೆ. ಈ ಪರಿಸ್ಥಿತಿಯನ್ನು ತಪ್ಪಿಸಲು, ಹೆಚ್ಚಿನ ಚೀನೀ ಕುಟುಂಬಗಳು ಪ್ರೇತ ವಿವಾಹಗಳನ್ನು ನಡೆಸುತ್ತವೆ. ಇದಲ್ಲದೆ, ಗಂಡು ಮಕ್ಕಳು ಸತ್ತರೆ, ಆ ಆತ್ಮವು ಜೀವಂತ ಹುಡುಗಿಯನ್ನು ಮದುವೆಯಾಗುತ್ತದೆ. ವಂಶಾವಳಿಯನ್ನು ಮುಂದುವರಿಸಲು, ಹುಡುಗಿ ಮಗುವನ್ನು ದತ್ತು ತೆಗೆದುಕೊಂಡು ಕುಟುಂಬವಾಗಿ ಮುಂದುವರಿಯುತ್ತಾಳೆ. ಅದೇ ರೀತಿ, ಕುಟುಂಬ ಸಂಪ್ರದಾಯವನ್ನು ಕಾಪಾಡಿಕೊಳ್ಳಲು ಪ್ರೇತ ವಿವಾಹಗಳನ್ನು ಮಾಡಲಾಗುತ್ತದೆ. ಕೆಲವು ಕುಟುಂಬಗಳಲ್ಲಿ, ಅನೇಕ ಪೋಷಕರು ಮದುವೆಯಲ್ಲಿ ಆಸಕ್ತಿ ಇಲ್ಲದ ಹುಡುಗಿಯರನ್ನು ಪ್ರೇತ ವಿವಾಹಕ್ಕೆ ಒತ್ತಾಯಿಸುತ್ತಾರೆ. ಸಮಾಜದ ಒತ್ತಡವನ್ನು ತಪ್ಪಿಸಲು ಕೆಲವರು ಪ್ರೇತ ವಿವಾಹವನ್ನು ಸಹ ಆರಿಸಿಕೊಳ್ಳುತ್ತಾರೆ.

ಮದುವೆ ಹೇಗೆ ನಡೆಯುತ್ತದೆ?

ಮೃತರ ಕುಟುಂಬದವರು ಫೆಂಗ್ ಶೂಯಿ ಗುರುಗಳ ಸಹಾಯದಿಂದ ಪ್ರೇತ ವಿವಾಹಗಳನ್ನು ಮಾಡುತ್ತಾರೆ. ನಮ್ಮ ದೇಶದಲ್ಲಿ ಜ್ಯೋತಿಷಿಯಂತೆಯೇ ಚೀನಾದಲ್ಲಿ ಫೆಂಗ್ ಶೂಯಿ ಗುರುಗಳ ಸಲಹೆಯನ್ನು ಪಡೆಯುತ್ತಾರೆ. ಮೃತರಿಗೆ ಸೂಕ್ತ ಸಂಗಾತಿಯನ್ನು ಹುಡುಕುವಲ್ಲಿ ಪೋಷಕರು ಮುಂದಾಳತ್ವ ವಹಿಸುತ್ತಾರೆ. ಮೃತ ಅಥವಾ ಜೀವಂತ ವ್ಯಕ್ತಿಯ ಚಿತ್ರಗಳು, ಅರ್ಹತೆಗಳು ಮತ್ತು ಗುಣಲಕ್ಷಣಗಳನ್ನು ಅರ್ಥಮಾಡಿಕೊಂಡ ನಂತರ ಮೃತ ಅಥವಾ ಜೀವಂತ ವ್ಯಕ್ತಿಯನ್ನು ಸೂಕ್ತವೆಂದು ಪರಿಗಣಿಸಿದರೆ ಮಾತ್ರ ಮದುವೆಯನ್ನು ನಡೆಸಲಾಗುತ್ತದೆ. ಮೃತದೇಹವನ್ನು ಹೊರತೆಗೆದು ವಧು-ವರರಂತೆ ಅಲಂಕರಿಸಲಾಗುತ್ತದೆ ಮತ್ತು ವಿವಾಹ ಸಮಾರಂಭವನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಗುತ್ತದೆ. ಎರಡು ಸಮಾಧಿಗಳಿಂದ ಹೊರತೆಗೆದ ದೇಹವನ್ನು ನಂತರ ಒಂದು ಸಮಾಧಿಯಲ್ಲಿ ಹೂಳಲಾಗುತ್ತದೆ. ಮೃತರು ಬಹಳ ದಿನಗಳ ಹಿಂದೆಯೇ ಮೃತಪಟ್ಟಿದ್ದರೆ, ಅವರ ಎಲ್ಲಾ ಚಿತ್ರಗಳು ಮತ್ತು ಬಟ್ಟೆಗಳನ್ನು ಆ ವ್ಯಕ್ತಿಯ ಸ್ಥಳದಲ್ಲಿ ಇರಿಸಲಾಗುತ್ತದೆ. ಸಾಮಾನ್ಯ ವಿವಾಹದಂತೆಯೇ, ಈ ಕೂಟಗಳು ಸಹ ಸಂಕೀರ್ಣವಾದ ಆಚರಣೆಗಳನ್ನು ಹೊಂದಿವೆ. ಇದಕ್ಕೆ ಸಾಮಾನ್ಯ ವಿವಾಹದಷ್ಟೇ ಹಣ ಖರ್ಚಾಗುತ್ತದೆ.

ಮ್ಯಾಚ್‌ಮೇಕಿಂಗ್ ಕಂಪನಿಗಳು

ಪೋಷಕರು ತಮ್ಮ ಮೃತ ಮಕ್ಕಳಿಗೆ ಸಂಗಾತಿಗಳನ್ನು ಹುಡುಕುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ಚೀನಾದಲ್ಲಿ ಸತ್ತವರಿಗೆ ಸಂಗಾತಿಗಳನ್ನು ಹುಡುಕಲು ಮೀಸಲಾಗಿರುವ ಕಂಪನಿಗಳು ಇವೆ. ಪ್ರಸ್ತುತ ಚೀನಾದಲ್ಲಿ ಪ್ರೇತ ವಿವಾಹ ಕಾನೂನುಬಾಹಿರವಾಗಿದ್ದರೂ, ಇದು ಇನ್ನೂ ಅನೇಕ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿದೆ. 1990ರ ದಶಕದಲ್ಲಿ, ಈ ಕಂಪನಿಗಳು ಪ್ರೇತ ವಿವಾಹವನ್ನು ಏರ್ಪಡಿಸಲು ಸುಮಾರು 5,000 ಯುವಾನ್ (ರೂ. 59,020) ಶುಲ್ಕ ವಿಧಿಸುತ್ತಿದ್ದವು. 2000ರಲ್ಲಿ, ಇದು 50,000 ಯುವಾನ್ (ರೂ. 5,90,205) ಗೆ ಏರಿತು. 2016 ರಲ್ಲಿ, ಇದು 150,000 ಯುವಾನ್ (ರೂ. 17,70,616) ಗೆ ತೀವ್ರವಾಗಿ ಏರಿತು.

ಪ್ರಸ್ತುತ, ಚೀನಾದ ಕಾನೂನಿನ ಪ್ರಕಾರ, ಶವವನ್ನು ಕದಿಯುವುದು, ಅಗೌರವ ತೋರಿಸುವುದು ಅಥವಾ ನಾಶಪಡಿಸುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧವಾಗಿದೆ. ಈ ಕಾನೂನುಗಳ ಹೊರತಾಗಿಯೂ ಪ್ರೇತ ವಿವಾಹಗಳನ್ನು ಇನ್ನೂ ಆಚರಿಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net