

ಪ್ಯಾರಿಸ್: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ 57 ಕೆಜಿ ವಿಭಾಗದಲ್ಲಿ 13-5 ಅಂತರದಿಂದ ಡೇರಿಯನ್ ಟಾಯ್ ಕ್ರೂಜ್ ಮಣಿಸಿ, ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕೇವಲ 21 ವರ್ಷ ವಯಸ್ಸಿಗೆ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ದೇಶವ್ಯಾಪಿ ಮೆಚ್ಚುಗೆ, ಅಭಿನಂದನೆ ಗಳಿಸುತ್ತಿರುವ ಈ ಯುವ ಚಾಂಪಿಯನ್, ಒಂದೇ ರಾತ್ರಿಯಲ್ಲಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದರೆ ನೀವು ನಂಬುತ್ತೀರಾ.
ಪೋರ್ಟೊ ರಿಕೊ ಕುಸ್ತಿಪಟು ಡೇರಿಯನ್ ಟಾಯ್ ಕ್ರೂಜ್ ವಿರುದ್ಧ ನಡೆದ ಪಂದ್ಯಕ್ಕೂ ಮುನ್ನ ಅಮನ್ ಅವರ ತೂಕವು 61.5 ಕೆಜಿಯಷ್ಟಿತ್ತು. ವಿನೇಶ್ ಫೋಗಟ್ ಅವರಂತೆ ಸಾಕಷ್ಟು ತೂಕ ಹೆಚ್ಚಾಗಿತ್ತು. 57 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್, ಸೆಮಿಫೈನಲ್ ಪಂದ್ಯದಲ್ಲಿ ಸೋತಾಗ ಅವರ ತೂಕ 4.5 ಕೆಜಿ ಹೆಚ್ಚಾಗಿತ್ತು. ಹೀಗಾಗಿ ಅಮನ್ಗೆ ಕಂಚಿನ ಪದಕ ಸಿಗುವುದು ಡೌಟ್ ಎಂದು ಹೇಳಲಾಗಿತ್ತು. ಇದೆಲ್ಲವನ್ನೂ ಮೆಟ್ಟಿ ಅಮನ್ ಕಂಚಿನ ಪದಕ ಗೆದ್ದಿರುವುದರ ಹಿಂದಿನ ಕಥೆಯೇ ಬಲು ರೋಚಕವಾಗಿದೆ.
ವಾಸ್ತವವಾಗಿ ಕಂಚಿನ ಪದಕಕ್ಕೂ ಮುನ್ನ ಅಮನ್ ಸೆಹ್ರಾವತ್ ಅವರ ತೂಕವೂ 61.5 ರಷ್ಟಿತ್ತು. 57 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್, ಸೆಮಿಫೈನಲ್ ಪಂದ್ಯದಲ್ಲಿ ಸೋತಾಗ ಅವರ ತೂಕ 4.6 ಕೆಜಿ ಹೆಚ್ಚಾಗಿತ್ತು. ಅಂದರೆ ಅವರು ಬರೋಬ್ಬರಿ 61.5 ಕೆಜಿ ತೂಗುತ್ತಿದ್ದರು. ಹೀಗಾಗಿ ಅಮನ್ಗೆ ಕಂಚಿನ ಪದಕ ಸಿಗುವುದು ಅನುಮಾನವಾಗಿತ್ತು. ಆದರೆ, ಕೇವಲ 10 ಗಂಟೆಗಳೊಳಗೆ ಅಮನ್ ಬರೋಬ್ಬರಿ 4.6 ಕೆ.ಜಿ ತೂಕವನ್ನು ಇಳಿಸಿಕೊಂಡರು. ತರಬೇತುದಾರರಾದ ಜಗಮಂದರ್ ಸಿಂಗ್ ಮತ್ತು ವೀರೇಂದ್ರ ದಹಿಯಾ, ಒಟ್ಟು 6 ಸದಸ್ಯರ ಕುಸ್ತಿ ತಂಡ ಅಮನ್ ಅವರ ತೂಕವನ್ನು 57 ಕೆಜಿಗೆ ಇಳಿಸುವಲ್ಲಿ ಯಶಸ್ವಿಯಾಯಿತು.
ಕೇವಲ 10 ಗಂಟೆಯಲ್ಲಿ ಅಮನ್ ತೂಕ ಇಳಿಸಿದ್ದು, ಹೇಗೆ ಎಂದು ನೋಡುವುದಾದರೆ ಮೊದಲಿಗೆ ಅಮನ್ ಸೆಹ್ರಾವತ್ಗೆ ಒಂದೂವರೆ ಗಂಟೆ ಮ್ಯಾಟ್ ಸೆಷನ್ ನೀಡಲಾಗಿದೆ. ಇದರಲ್ಲಿ ಅವರನ್ನು ನಿಂತಲ್ಲೇ ಕುಸ್ತಿಯಾಡುವಂತೆ ಸೂಚನೆ ನೀಡಲಾಗಿದೆ. ಇದಾದ ಬಳಿಕ ಒಂದು ಗಂಟೆ ಹಬೆ ಸ್ನಾನ ಮಾಡಿಸಲಾಗಿದೆ. ರಾತ್ರಿ 10 ಗಂಟೆ ನಂತರ ಜಿಮ್ನಲ್ಲಿ ಒಂದು ಗಂಟೆಗಳ ಕಾಲ ಟ್ರೆಡ್ಮಿಲ್ ಮೇಲೆ ಓಡಿಸಲಾಗಿದೆ. ಆ ನಂತರ 30 ನಿಮಿಷಗಳ ಕಾಲ ವಿಶ್ರಾಂತಿ ನೀಡಲಾಗಿದೆ. ಇದಾದ ಬಳಿಕ ಅಮನ್ಗೆ ಮಸಾಜ್, ಲಘು ಜಾಗಿಂಗ್ ಮತ್ತು 15 ನಿಮಿಷಗಳ ಓಟದ ಸೆಷನ್ ಮಾಡಿಸಿ ಅವರ ತೂಕವನ್ನು ಇಳಿಸಲಾಗಿದೆ.
ಒಂದು ರಾತ್ರಿಯಲ್ಲಿ ಇಷ್ಟೆಲ್ಲ ಕಷ್ಟಪಟ್ಟ ಅಮನ್ ಅವರ ತೂಕ ಬೆಳಗಿನ ಜಾವ 4.30ರ ಹೊತ್ತಿಗೆ 56.9 ಕೆಜಿ ಅಂದರೆ ನಿಗದಿತ ಮಿತಿಗಿಂತ 100 ಗ್ರಾಂ ಕಡಿಮೆಯಾಗಿದೆ. ಅಮನ್ ಸೆಹ್ರಾವತ್ ಅವರು 10 ಗಂಟೆಗಳಲ್ಲಿ 4.6 ಕೆಜಿ ತೂಕವನ್ನು ಕಡಿಮೆ ಮಾಡಿರುವುದು ಅಚ್ಚರಿಯ ಸಂಗತಿಯಾಗಿದೆ. ಏಕೆಂದರೆ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣದಿಂದ ಅನರ್ಹಗೊಂಡ ವಿಚಾರ ಎಲ್ಲರಿಗೂ ತಿಳಿದೇ ಇದೆ.
ಮಹಿಳೆಯರ 50 ಕೆಜಿ ತೂಕ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗಟ್ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಆದರೆ ಫೈನಲ್ಗೆ ಮೊದಲು ಅವರು ನಿಗದಿತ ಮಿತಿಗಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆ ಎಂಬುದು ಪತ್ತೆಯಾದ ಕಾರಣ ಅವರನ್ನು ಅನರ್ಹಗೊಳಿಸಲಾಗಿತ್ತು. ಸದ್ಯ ವಿನೇಶ್ ಪ್ರಕರಣ ಸಿಎಎಸ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಆಗಸ್ಟ್ 13ರಂದು ನಿರ್ಧಾರ ಹೊರಬೀಳಲಿದೆ.