ನನ್ನ ಕೊನೆಯ ಟಿ-20 ಚೆನ್ನೈನಲ್ಲಿ…. ಐಪಿಎಲ್ ವೇಳಾಪಟ್ಟಿ ಬೆನ್ನಲ್ಲೇ ವೈರಲ್ ಆಗ್ತಿದೆ ಧೋನಿಯ ಹಳೇ ವಿಡಿಯೋ!

WhatsApp Image 2024-03-26 at 8.05.07 AM
Published on

ಚೆಪಾಕ್‌: ಐಪಿಎಲ್ 2024ರ ಆವೃತ್ತಿ ಪ್ರಾರಂಭವಾದ ಬೆನ್ನಲ್ಲೇ ಸಿಎಸ್​ಕೆ ತಂಡವನ್ನು ಮುನ್ನಡೆಸದ ಮಾಜಿ ಕ್ಯಾಪ್ಟನ್​, ಮಹೇಂದ್ರ ಸಿಂಗ್ ಧೋನಿ, ತಮ್ಮ ನಾಯಕತ್ವ ಸ್ಥಾನವನ್ನು ರುತುರಾಜ್ ಗಾಯಕ್ವಾಡ್​ಗೆ ಹಸ್ತಾಂತರಿಸುವ ಮೂಲಕ ಜವಾಬ್ದಾರಿಗಳಿಂದ ಕೊಂಚ ಹಿಂದೆ ಸರಿದಿದ್ದಾರೆ. ಮಾ.22ರಂದು ನಡೆದ ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಗೆದ್ದ ಧೋನಿ ಪಡೆ, ತವರಿನಲ್ಲಿ ಮೊದಲ ಗೆಲುವು ದಾಖಲಿಸಿತು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ, ಮಾರ್ಚ್ 25ರಂದು ಐಪಿಎಲ್​ 2024ರ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಿತು. ಈ ಹಿಂದೆ ಕೇವಲ ಪಂದ್ಯಗಳ ಮೊದಲ 21 ದಿನಗಳ ಶೆಡ್ಯೂಲ್ ಮಾತ್ರ ಪ್ರಕಟವಾಗಿತ್ತು, ಈಗ ಸಂಪೂರ್ಣ ವೇಳಾಪಟ್ಟಿ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಧೋನಿ ಅವರ ಹಳೆಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಲೀಗ್ ಹಂತವು ಮೇ 19ರಂದು ಕೊನೆಗೊಳ್ಳಲಿದ್ದು, ಅಂಕಪಟ್ಟಿಯಲ್ಲಿರುವ ಟಾಪ್​ 4 ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿವೆ. ನಾಕೌಟ್ ಹಂತವು ಮೇ 21ರಂದು ಪ್ರಾರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಅನ್ನು ನಿಗದಿಪಡಿಸಿರುವ ಬಿಸಿಸಿಐ, ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯವನ್ನು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್ ಸ್ಟೇಡಿಯಂ) ನಿಗದಿಪಡಿಸಿದೆ.

ಐಪಿಎಲ್ 2024ರ ಫೈನಲ್ ಚೆನ್ನೈನಲ್ಲಿ ನಡೆಯಲಿದೆ ಎಂದು ಘೋಷಿಸಿದ ಹಿನ್ನೆಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇಂಡಿಯಾ ಸಿಮೆಂಟ್ಸ್ ಆಯೋಜಿಸಿದ್ದ ಸಮಾರಂಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದ ಕ್ಯಾಪ್ಟನ್ ಕೂಲ್, ಬಹುಶಃ ನನ್ನ ಕೊನೆಯ ಟಿ-20 ಚೆನ್ನೈನಲ್ಲಿ ಮುಗಿಯುತ್ತದೆ ಎಂದು ಭಾವಿಸುತ್ತೀನಿ ಎಂದಿದ್ದರು.

ಸದ್ಯ ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ವ್ಯಾಪಕವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net