

ಬಾರ್ಬೋಡಾಸ್: ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ನ 43ನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆಯನ್ನು ನೀಡಿದೆ. ಇತ್ತ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಯಾವ ಕಾರಣಕ್ಕೆ ಎಂದು ಹಲವರಲ್ಲಿ ಆಶ್ವರ್ಯವನ್ನುಂಟು ಮಾಡುತ್ತಿದೆ.
ಟೀಮ್ ಇಂಡಿಯಾದ ಮಾಜಿ ಆಟಗಾರ, ಅರಸೀಕೆರೆ ಎಕ್ಸ್ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕ ಮೂಲದ ಕ್ರಿಕೆಟಿಗ ಡೇವಿಡ್ ಜಾನ್ಸನ್ ಇಂದು ಮೃತಪಟ್ಟಿದ್ದಾರೆ. ಹೀಗಾಗಿ ಡೇವಿಡ್ ಜಾನ್ಸನ್ ಅವರಿಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ ಭಾರತದ ಎಲ್ಲಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದಾರೆ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಜಾನ್ಸನ್ ಇತ್ತೀಚೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ವರದಿಗಳ ಪ್ರಕಾರ ಖಿನ್ನತೆಯಿಂದ ಬಳಲುತ್ತಿದ್ದ ಅವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ ಡೇವಿಡ್ ಜಾನ್ಸನ್, ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿ ಮೂರು ವಿಕೆಟ್ ಪಡೆದಿದ್ದಾರೆ. ಆ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಪರ ಅತಿವೇಗದ ಬೌಲಿಂಗ್ ಮಾಡಿದ ದಾಖಲೆ ಡೇವಿಡ್ ಜಾನ್ಸನ್ ಅವರ ಹೆಸರಿನಲ್ಲಿತ್ತು. 1996ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಡೇವಿಡ್ ಜಾನ್ಸನ್, ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಮಾಡಿದ್ದಾಗ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆ ಸರಣಿಯಲ್ಲಿ ಡೇವಿಡ್ ಜಾನ್ಸನ್ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಡೇವಿಡ್ ಜಾನ್ಸನ್ ಒಟ್ಟು 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ 125 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೆಳಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಜಾನ್ಸನ್ 437 ರನ್ ಬಾರಿಸಿದ್ದಾರೆ. ಹೀಗಾಗಿ ತಂಡದ ಹಿರಿಯ ಆಟಗಾರನಾಗಿದ್ದ ಜಾನ್ಸನ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಟೀಮ್ ಇಂಡಿಯಾ ಆಟಗಾರರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ.