

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL) ಆರಂಭಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ತಯಾರಿಗಳು ಜೋರಾಗಿಯೇ ನಡೆಯುತ್ತಿವೆ. ಈಗಾಗಲೇ ರಿಟೇನ್ (Retain) ನಿಯಮವನ್ನು ಬಿಡುಗಡೆ ಮಾಡಿರುವ ಆಡಳಿತ ಮಂಡಳಿ ಈ ತಿಂಗಳಾಂತ್ಯಕ್ಕೆ ಪಟ್ಟಿ ಸಲ್ಲಿಸುವಂತೆ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ. ರಿಟೇನ್ಗೆ ಸಂಬಂಧಿಸಿದಂತೆ ಈಗಾಗಲೇ ತಂಡಗಳು ಪಟ್ಟಿಯನ್ನು ಸಿದ್ದ ಮಾಡಿಕೊಂಡಿದ್ದು, ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.
ರಿಟೇನ್ ನಿಯಮಕ್ಕೆ ಸಂಬಂಧಿಸಿದಂತೆ ಕೆಲವು ಆಟಗಾರರು ತಾವು ಹಾಲಿ ಪ್ರತಿನಿಧಿಸುತ್ತಿರುವ ತಂಡದಲ್ಲಿ ಉಳಿದುಕೊಳ್ಳಲು ಇಲ್ಲಸಲ್ಲದ ಕಸರತ್ತನ್ನು ಮಾಡುತ್ತಿದ್ದು, ತಮ್ಮನ್ನು ಈ ಒಂದು ಕಾರಣಕ್ಕಾಗಿ ರಿಟೇನ್ (Retain) ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ಈ ಕುರಿತು ಮಾತನಾಡಿರುವ ಕಲ್ಕತ್ತಾ ನೈಟ್ರೈಡರ್ಸ್ (Kolkata Knight Riders) ತಂಡದ ಬ್ಯಾಟ್ಸ್ಮನ್ ನಿತೀಶ್ ರಾಣಾ (Nitish Rana) ತಮ್ಮನ್ನು ಯಾವ ಕಾರಣಕ್ಕೆ ರಿಟೇನ್ (Retain) ಮಾಡಬೇಕು ಎಂಬುದರ ಕುರಿತು ಕಾರಣವನ್ನು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಿತೀಶ್ (Nitish), ನಾನು ಕಳೆದ ಏಳು ವರ್ಷಗಳಿಂದ ಕೆಕೆಆರ್ಗೆ ಸೇವೆ ಸಲ್ಲಿಸುತ್ತಿದ್ದೇನೆ. ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳುವುದು ನನ್ನ ಕೈಯಲ್ಲಿಲ್ಲ. ಉಳಿಸಿಕೊಳ್ಳುವುದು ನನ್ನ ಕೈಯಲ್ಲಿಲ್ಲ; ಅದನ್ನು ನಿರ್ಧರಿಸುವುದು ಕೆಕೆಆರ್ (KKR) ಆಡಳಿತಕ್ಕೆ ಬಿಟ್ಟದ್ದು. ನನಗೆ ಇನ್ನೂ ಯಾವುದೇ ಕರೆಗಳು ಬಂದಿಲ್ಲ. ನಾನು ಪ್ರತಿ ವರ್ಷ ಕೆಕೆಆರ್ಗಾಗಿ (KKR) ರನ್ ಗಳಿಸಿದ್ದೇನೆ ಮತ್ತು ಅವರು ನನ್ನನ್ನು ಆಸ್ತಿ ಎಂದು ಪರಿಗಣಿಸಿ ರಿಟೇನ್ ಮಾಡಿಕೊಳ್ಳಬೇಕು. ಅವರು ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಐಪಿಎಲ್ ರಿಟೇನ್ಗೆ (IPL Retain) ಸಂಬಂಧಿಸಿದಂತೆ ಈಗಾಗಲೇ ಚಟುವಟಿಕೆಗಳು ಗರಿಗೆದರಿದ್ದು, ಬಹುತೇಕ ಎಲ್ಲಾ ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಸಿದ್ದ ಮಾಡಿಕೊಂಡಿವೆ. ಅಕ್ಟೋಬರ್ 31ರಂದು ತಂಡಗಳು ಆಡಳಿತ ಮಂಡಳಿಗೆ ಪಟ್ಟಿಯನ್ನು ಸಲ್ಲಿಸಲಿದ್ದು, ಆ ಬಳಿಕ ಯಾವ ಆಟಗಾರ ತಂಡದಲ್ಲಿ ಉಳಿದುಕೊಂಡಿದ್ದಾನೆ. ಯಾರು ಹರಾಜಿನಲ್ಲಿದ್ದಾರೆ ಎಂಬುದು ತಿಳಿದು ಬರಲಿದೆ.