

ಲಖನೌ: ನಿನ್ನೆ (ಏ.30) ಇಲ್ಲಿನ ಏಕನಾ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಲಕ್ನೋ ಸೂಪರ್ ಜೈಂಟ್ಸ್ (Luknow Super Giants) ನಡುವಿನ ಪಂದ್ಯದಲ್ಲಿ ಎಲ್ಎಸ್ಜಿ ತಂಡವು ನಾಲ್ಕು ವಿಕೆಟ್ಗಳ ಅಂತರದಿಂದ ಮುಂಬೈ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಖಂಡಿತ ಉತ್ತಮ ಪ್ರದರ್ಶನ ನೀಡಿ, ಸತತ ಸೋಲುಗಳಿಂದ ಹೊರಬರುತ್ತಾರೆ ಎಂದು ಭರವಸೆ ಹೊಂದಿದ್ದ ಎಂಐ ಅಭಿಮಾನಿಗಳಿಗೆ ಈ ಸೋಲು ಭಾರೀ ನಿರಾಸೆ ಉಂಟುಮಾಡಿತು.
ಸತತ ಸೋಲುಗಳಿಂದ ಹಾಗೂ ಉತ್ತಮ ಪ್ರದರ್ಶನವಿಲ್ಲದೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಇದೀಗ ಫ್ಯಾನ್ಸ್ ಅತೀವ ಬೇಸರ ಹೊರಹಾಕಿದ್ದಾರೆ. ಅದರಲ್ಲೂ ಪ್ರತ್ಯೇಕವಾಗಿ ತಂಡದ ಕ್ಯಾಪ್ಟನ್ ಆದ ಹಾರ್ದಿಕ್ ಪಾಂಡ್ಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಇದೆಲ್ಲದರಿಂದ ಕೆಂಗಟ್ಟಿದ್ದ ಹಾರ್ದಿಕ್ಗೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ನಿನ್ನೆಯ ಪಂದ್ಯದಲ್ಲಿ ಮಂದಗತಿಯ ಓವರ್-ರೇಟ್ ಮಾಡಿದ್ದಕ್ಕೆ ಇಡೀ ತಂಡಕ್ಕೆ ಭಾರೀ ದಂಡ ವಿಧಿಸಲಾಗಿದೆ.
ಈ ಸೀಸನ್ನಲ್ಲಿ ಎರಡನೇ ಬಾರಿಗೆ ಮಂದಗತಿಯ ಓವರ್-ರೇಟ್ ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್ ತಂಡದ ಪ್ರತಿ ಆಟಗಾರರಿಗೆ ಕೇವಲ 6 ಲಕ್ಷ ರೂ. ದಂಡ ವಿಧಿಸಿದರೆ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಮಾತ್ರ 24 ಲಕ್ಷ ರೂ. ಪೆನಾಲ್ಟಿ ಹಾಕಲಾಗಿದೆ. ಈ ಮೂಲಕ ಈ ತಪ್ಪನ್ನು ಮತ್ತೊಮ್ಮೆ ಮಾಡದಂತೆ ತಂಡಕ್ಕೆ ಎಚ್ಚರಿಸಲಾಗಿದೆ. ಸದ್ಯ ಈ ವಿಷಯ ಕೇಳುತ್ತಿದ್ದಂತೆ ಫ್ಯಾನ್ಸ್ ಕಂಗಾಲಾಗಿದ್ದು, ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಯಿತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).