ಲಖನೌ ಎದುರು 33 ರನ್​ಗಳ ಸೋಲು! ಪ್ಲೇಆಫ್ ಬೆನ್ನಲ್ಲೇ ಕ್ಯಾಪ್ಟನ್​ ಗಿಲ್​ ಅಚ್ಚರಿ ಹೇಳಿಕೆ | GT vs LSG

ವಿಜಯವಾಣಿ - 2025-05-23T083429.397
Published on

GT vs LSG: ನಿನ್ನೆ (ಮೇ.22) ಅಹಮದಾಬಾದ್​ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ 33 ರನ್​ಗಳಿಂದ ಎಲ್​ಎಸ್​ಜಿ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಯಾಪ್ಟನ್ ಶುಭಮನ್ ಗಿಲ್​, ಲಖನೌ ಸೂಪರ್ ಜೈಂಟ್ಸ್​ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಪಡೆ, 20 ಓವರ್​ ಅಂತ್ಯಕ್ಕೆ ಕೇವಲ 2 ವಿಕೆಟ್​ ಕಳೆದುಕೊಂಡು 235 ರನ್​ ದಾಖಲಿಸಿತು. ಈ ಬೃಹತ್​ ಗುರಿಯನ್ನು ಬೆನ್ನತ್ತಿದ ಜಿಟಿ ಪಡೆಗೆ ಆರಂಭಿಕ ಆಘಾತವೇ ಸೋಲಿನ ದಾರಿಯನ್ನು ತೋರಿಸಿತು.

ಆರಂಭಿಕ ಬ್ಯಾಟರ್​ಗಳಾದ ಶುಭಮನ್ ಗಿಲ್​ ಮತ್ತು ಜಾಸ್ ಬಟ್ಲರ್​, ಉತ್ತಮ ಆರಂಭ ನೀಡಿದ್ದೇ ಆದರೂ ಪವರ್​ಪ್ಲೇ ನಂತರ ಸ್ಫೋಟಕ ಇನ್ನಿಂಗ್ಸ್​ ಮುಂದುವರಿಸಲಿಲ್ಲ. ಇದೇ ತಂಡದ ಸೋಲಿಗೆ ದೊಡ್ಡ ಕಾರಣವಾಗಿ ತಿರುಗಿತು. ಪ್ಲೇಆಫ್​ ಹೊಸ್ತಿಲಲ್ಲಿರುವ ಗುಜರಾತ್​ ಟೈಟನ್ಸ್​ಗೆ ಈ ಸೋಲು ಭಾರೀ ನಿರಾಶೆ ಉಂಟುಮಾಡಿತು. ಪಂದ್ಯ ಸೋತ ಬಳಿಕ ಮಾತನಾಡಿದ ಗಿಲ್​, ತಮ್ಮ ಸೋಲಿಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದರು.

"ಇಂದಿನ ಸೋಲು ಕೊಂಚ ಬೇಸರ ಮೂಡಿಸಿದೆ. ಆದರೆ, ನಮ್ಮ ತಂಡ ನೀಡಿದ ಪ್ರದರ್ಶನ ಹಾಗೂ ಪೈಪೋಟಿ ಗಮನಾರ್ಹ. 15ರಿಂದ 20 ರನ್​ ಬಿಟ್ಟುಕೊಟ್ಟೆವು. ಅದನ್ನು ತಡೆಯುವಲ್ಲಿ ನಾವು ಮುಂದಿರಬೇಕಿತ್ತು. 210 ರನ್​ಗಳಿಗೆ ಎಲ್​ಎಸ್​​ಜಿಯನ್ನು ಕಟ್ಟಿಹಾಕಿದಿದ್ರೆ ಖಂಡಿತ ಫಲಿತಾಂಶ ಬೇರೆಯೇ ಇರುತ್ತಿತ್ತು. ನಮ್ಮ ಬೌಲರ್​ಗಳು ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ, ಪವರ್​ಪ್ಲೇನಲ್ಲಿ ವಿಕೆಟ್​ ಪಡೆಯಲಿಲ್ಲ. 240 ಗಡಿದಾಟುವ ರನ್​ಗಳ ಗುರಿಯನ್ನು ಬೆನ್ನತ್ತುವುದು ಅಷ್ಟು ಸುಲಭದ ಮಾತಲ್ಲ. ಪಂದ್ಯ ಸೋತರೂ ನಮ್ಮಲ್ಲಿ ಒಂದಷ್ಟು ಪಾಸಿಟಿವ್​ಗಳು ಇವೆ" ಎಂದು ಗಿಲ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net